ಬೆಂಗಳೂರು: ತುರ್ತು ಅಗತ್ಯ ಇರುವವರಿಗೆ ರಕ್ತದಾನ ಮಾಡುವ ಮೂಲಕ ಜೀವ ಉಳಿಸಲು ನೆರವಾಗಬೇಕು. ಜತೆಗೆ ತಮ್ಮ ಆರೋಗ್ಯವನ್ನೂ ಕೂಡ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ಚಲನಚಿತ್ರ ನಟಿ ಸಂಜನಾ ಸಲಹೆ ನೀಡಿದ್ದಾರೆ.
ಭಾನುವಾರ ಮಲ್ಲೇಶ್ವರಂ ಸಂರಕ್ಷಣಾ ಸಮಿತಿ ವತಿಯಿಂದ ಕೋದಂಡರಾಮಪುರದ ಕಬ್ಬಡಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಸ್ವತಃ ರಕ್ತದಾನ ಮಾಡಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ನಮ್ಮ ದೇಹಕ್ಕೆ ಒಳಿತು. ಜತೆಗೆ ನೊಂದವರಿಗೂ ನೆರವಾದಂತಾಗುತ್ತದೆ. ಸ್ವಇಚ್ಛೆಯಿಂದ ರಕ್ತದಾನ ಮಾಡಿದರೆ ಬೇರೊಬ್ಬರ ಜೀವ ಉಳಿಸಿದ ನೆಮ್ಮದಿ ಸಿಗುತ್ತದೆ. ಹಾಗಾಗಿ ಇದಕ್ಕೆ ಯಾವುದೇ ಯೋಚನೆ, ಹಿಂಜರಿಕೆ ಬೇಡ ಎಂದು ಸಲಹೆ ನೀಡಿದರು.
ಕಣ್ಣು, ಹೃದಯ, ಪೈಲ್ಸ್, ಹರ್ನಿಯಾ, ಗರ್ಭಕೋಶ, ಶ್ರವಣದೋಷ, 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಸೇರಿದಂತೆ ಇತರೆ ತಪಾಸಣೆಗಳನ್ನು ನಡೆಸಲಾಯಿತು. ಸಮಿತಿ ಅಧ್ಯಕ್ಷ ಎಸ್.ಪ್ರಕಾಶ್ ಐಯ್ಯಂಗಾರ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಜನರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಲ್ಲೇಶ್ವರ ಬಡಾವಣೆಯಲ್ಲಿ ಒಟ್ಟು 7 ವಾರ್ಡ್‌ಗಳಿದ್ದು, ಪ್ರತಿವಾರ ಒಂದು ವಾರ್ಡ್‌ನಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗುವುದು.
ಈಮೂಲಕ ನೊಂದವರಿಗೆ ನೆರವು ನೀಡಲಾಗುವುದು ಎಂದು ಹೇಳಿದರು. ಹಿರಿಯ ನಾಗರಿಕರಿಗೆ ಕಣ್ಣು ಹಾಗೂ ಹೃದಯದ ಸಮಸ್ಯೆ ಕಾಡುತ್ತದೆ. ಹಾಗಾಗಿ ಅವರನ್ನು ತಪಾಸಣೆ ಮಾಡಲಾಗುವುದು. ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದಾದಲ್ಲಿ ವೈದ್ಯರು ನಿಗದಿಪಡಿಸಿದ ದಿನ ಆಸ್ಪತ್ರೆಗೆ ಹೋದಲ್ಲಿ ರಿಯಾಯಿತಿ ಇಲ್ಲವೇ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಪಂಚಮುಖೀ ಯುವವೇದಿಕೆ, ಶಾರದಾ ರೋಟರಿ ಕಣ್ಣಿನ ಆಸ್ಪತ್ರೆ, ಮಣಿಪಾಲ್ ಹಾರ್ಟ್ ಫೌಂಡೇಷನ್, ನಾರಾಯಣ ಹೃದಯಾಲಯ, ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದವು.