ಹರೇಕಳ : ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಧರ್ಮದ ಜನರು ಒಗ್ಗಟ್ಟಿಗೆ ಆದ್ಯತೆ ನೀಡುವ ಉತ್ತಮ ಗುಣ ಹೊಂದಿದ್ದು, ಇದರಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಆಹಾರ ಸಚಿವ ಯು.ಟಿ.ಖಾದರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಗುರುವಾರ ಹರೇಕಳ ಕಾಂಗ್ರೆಸ್ ಗ್ರಾಮ ಸಮಿತಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಧನ ಸಹಾಯ, ನೀರಿನ ಬೆಡ್ ಕೊಡುಗೆ ನೀಡಿ ಮಾತನಾಡಿದರು.
ಗ್ರಾಮದಲ್ಲಿ 130 ಅರ್ಜಿಗಳು ಪಡಿತರ ಚೀಟಿಗೆ ಬಂದಿದ್ದು, 25 ಮಂದಿಗೆ ಅಂಚೆ ಮೂಲಕ ಚೀಟಿ ತಲುಪಿದೆ. ಪ್ರತಿಯೊಬ್ಬರೂ ಗ್ರಾಮದ ಒಗ್ಗಟ್ಟಿಗೆ ಪ್ರಥಮ ಆದ್ಯತೆ ನೀಡಿ, ಬಳಿಕ ರಾಜಕೀಯ ಮಾಡಬೇಕು ಎಂದರು.
ಕಾರ್ಯಕ್ರಮದ ಉಸ್ತುವಾರಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್ ಮುಸ್ತಫಾ ಮಲಾರ್ ಮಾತನಾಡಿ, ಉಳ್ಳಾಲ ಕ್ಷೇತ್ರವಿದ್ದ ಸಂದರ್ಭ ಯು.ಟಿ.ಖಾದರ್ ಅವರನ್ನು ಸೋಲಿಸುವ ಸಲುವಾಗಿ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉಳ್ಳಾಲದಲ್ಲಿ ಠಿಕಾಣಿ ಹೂಡಿದರು. ಆಗಿನ ಉಪಮುಖ್ಯಮಂತ್ರಿ ಯಡಿಯೂರಪ್ಪ ದತ್ತು ಸ್ವೀಕರಿಸಿ ಅಭಿವೃದ್ಧಿಪಡಿಸುವ ಭರವಸೆ ನೀಡಿದರೂ ಕ್ಷೇತ್ರದ ಜನ ಕೈಬಿಡಲಿಲ್ಲ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಡಿ’ಸೋಜಾ, ಉಪಾಧ್ಯಕ್ಷ ಮಹಾಬಲ ಹೆಗ್ಡೆ, ಸದಸ್ಯರಾದ ಎಂ.ಪಿ.ಮಜೀದ್, ಅಬ್ದುಲ್ ಸತ್ತಾರ್ ಬಾವಲಿಗುಲಿ, ಬದ್ರುದ್ದೀನ್ ಆಲಡ್ಕ, ಬಶೀರ್ ಉಂಬುದ, ಸಿಂತಿಯಾ ಮೆನೇಜಸ್, ಕಲ್ಯಾಣಿ, ಪೂವಕ್ಕು, ಪುಷ್ಪಲತಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಎಪಿಎಂಸಿ ಮಾಜಿ ಸದಸ್ಯ ಉಮ್ಮರ್ ಪಜೀರ್, ಜಿಲ್ಲಾ ಅಲ್ಪಸಂಖ್ಯಾಕ ವಿಭಾಗದ ಅಧ್ಯಕ್ಷ ಎನ್. ಎಸ್.ಕರೀಂ, ಮುಖಂಡರಾದ ಶೀನ ಶೆಟ್ಟಿ ಅಸೈಗೋಳಿ, ಎನ್.ಎಸ್.ಕರೀಂ, ಸಲೀಂ ಮೆಘಾ ಅಸೈಗೋಳಿ, ಇಕ್ಬಾಲ್ ಸಾಮಾಣಿಗೆ, ಸ್ಥಳೀಯ ಮುಖಂಡರಾದ ಸಂಶುದ್ದೀನ್, ಅಶೋಕ್ ಶೆಟ್ಟಿ, ಇಂತಿಯಾಝ್, ಅಝೀಝ್ ರಾಜಗುಡ್ಡೆ, ರಫಿಕ್ ರಾಜಗುಡ್ಡೆ,ಗ್ರಾ.ಪಂ. ಮಾಜಿ ಸದಸ್ಯ ಅಬ್ದುಲ್ ಖಾದರ್, ನಝರ್ ಷಾ ಪಟ್ಟೋರಿ, ಸಿರಾಜ್ ಕಿನ್ಯ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್ ವಂದಿಸಿದರು.