Advertisement

ಆರೋಗ್ಯ ಸೇವೆಗೆ ಸರ್ಕಾರ ಬದ್ಧ,ಆರೋಗ್ಯ ಸೇವಾ ಕೇಂದ್ರಗಳ ನಿರ್ಮಾಣಕ್ಕೆ ಆದ್ಯತೆ:ಸಿಎಂ ಬೊಮ್ಮಾಯಿ

03:12 PM Sep 25, 2021 | Team Udayavani |

ತುಮಕೂರು: ಆರೋಗ್ಯ ಸೇವೆಗೆ ಸರ್ಕಾರ ಬದ್ಧವಾಗಿದ್ದು, ಹೆಚ್ಚು ಹೆಚ್ಚು ಆರೋಗ್ಯ ಸೇವಾ ಆಸ್ಪತ್ರೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.

Advertisement

ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತುಮಕೂರು ಜಿಲ್ಲಾಸ್ಪತ್ರೆ ಹಾಗೂ ಬೆಂಗಳೂರು ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನೂತನ ಕ್ಯಾನ್ಸರ್ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಅಪೌಷ್ಟಿಕ ಮಕ್ಕಳ ಪುನಶ್ಚೇತನ  ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತುಮಕೂರು ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಜಿಲ್ಲೆಯಾಗಿದ್ದು, ಸಾಂಸ್ಕೃತಿಕ, ಕೈಗಾರಿಕಾ ವಲಯದಲ್ಲಿ ವೇಗವಾಗಿ ಬೆಳೆಯುತ್ತಿದೆ. ಜಿಲ್ಲೆಯ ಅಭಿವೃದ್ಧಿಯಿಂದಾಗಿ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದರು‌.

ಈ ನಿಟ್ಟಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದೆ. 100 ಹಾಸಿಗೆಗಳುಳ್ಳ ಕ್ಯಾನ್ಸರ್ ಕೇಂದ್ರ ಜಿಲ್ಲೆಗೆ ಬರುತ್ತಿರುವುದು ಸಂತಸ. ಇದರಿಂದ ಈ ಭಾಗದ ಎಲ್ಲಾ ಜನರಿಗೆ ಅನುಕೂಲವಾಗಲಿದೆ. ಅಧುನೀಕತೆ ಹೆಚ್ಚಿದಂತೆ ಕ್ಯಾನ್ಸರ್ ಹೆಚ್ಚುತ್ತಿದೆ‌. ಹೀಗಾಗಿ ಕ್ಯಾನ್ಸರ್ ಸೇವೆ ಅತ್ಯಗತ್ಯವಾಗಿದ್ದು, ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಸರ್ಕಾರ ತಾಯಿ ಮತ್ತು ಮಕ್ಕಳ ಆರೈಕೆಗೆ ಒತ್ತು ನೀಡಿದೆ. ತಾಯಿ ಮತ್ತು ಮಕ್ಕಳ ಸಾವನ್ನು ತಡೆಗಟ್ಟುವುದು ಅತೀ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ತುಮಕೂರಿನಲ್ಲಿ ಪ್ರತ್ಯೇಕವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ:ಕಾಪು:ಅಶ್ವತ್ಥ ನಾರಾಯಣ, ಶೋಭಾ ಕರಂದ್ಲಾಜೆಗೆ ಕಾಂಗ್ರೆಸ್ ಮುಖಂಡರಿಂದ ಮುತ್ತಿಗೆ!

Advertisement

ಕೋವಿಡ್ ಅಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲ ವೈದ್ಯರು, ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತೆಯರಿಗೆ ಮತ್ತು ಮಂಚೂಣಿ ಕಾರ್ಯಕರ್ತೆಯರಿಗೆ ಅಭಿನಂದನೆ ಸಲ್ಲಿಸಿದರು.

ಕೋವಿಡ್ ಅಲೆ ನಿರ್ವಹಣೆಗೆ ಇತಿಹಾಸದಲ್ಲೇ ಆಗದ ಕೆಲಸ ಒಂದೇ ವರ್ಷದಲ್ಲಿ ಆಗಿದೆ. ರಾಜ್ಯದಲ್ಲಿ 24 ವಿಶೇಷ ಹಾಗೂ 4 ಸಾವಿರ ಹಾಸಿಗೆಗಳ ವ್ಯವಸ್ಥೆ ಆಗಿರುವುದು ಅರೋಗ್ಯ ಸೇವೆಯ ಸಾಧನೆಯಾಗಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಸುಧಾಕರ್ ಅವರ ಶ್ರಮವಿದೆ ಎಂದರು.

ಅರೋಗ್ಯ ಸೇವೆಗೆ ಸರ್ಕಾರ, ಸಮುದಾಯ, ಸಂಸ್ಥೆಗಳು ಮೂರು ಒಗ್ಗಟ್ಟಾಗಿ‌ ಕೆಲಸ ಮಾಡಬೇಕು. ರಾಜ್ಯದಲ್ಲಿ ಮೂರನೇ ಅಲೆ ನಿಯಂತ್ರಣಕ್ಕೆ ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದೆ. ಯಾವುದೇ ಆಕ್ಸಿಜನ್, ಐಸಿಯು ಮತ್ತು ಬೆಡ್ ಗಳ ಸಮಸ್ಯೆಯಾಗುವುದಿಲ್ಲ. ಆರೋಗ್ಯ ಸೇವೆಗೆ ಸರ್ಕಾರ ಒತ್ತು ನೀಡಲಿದೆ. ಹೃದ್ರೋಗಕ್ಕೆ ಸಂಬಂಧಿಸಿದಂತೆ ಜಯದೇವ ಆಸ್ಪತ್ರೆಯನ್ನು ತುಮಕೂರಿಗೆ ಮಾಡಿಕೊಡುತ್ತೇವೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ  ಡಾ: ಕೆ.ಸುಧಾಕರ್ ಮಾತನಾಡಿ, ತುಮಕೂರು ಜಿಲ್ಲೆ ಗೇಟ್ ವೇ ಆಫ್ ಉತ್ತರ ಕರ್ನಾಟಕವಾಗಿದ್ದು, ಐದು ಜಿಲ್ಲೆಗೆ ಹೊಂದಿಕೊಂಡಿರುವ ವೇಗವಾಗಿ ಅಭಿವೃದ್ಧಿಹೊಂದುತ್ತಿರುವ ಜಿಲ್ಲೆಯಾಗಿದೆ. ಸಿದ್ಧಾರ್ಥ, ಶ್ರೀದೇವಿ ವೈದ್ಯಕೀಯ ಕಾಲೇಜುಗಳಿದ್ದು, ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಕಡತಕ್ಕೂ ಈಗ ತಾನೇ ಸಹಿ ಹಾಕಿ ಬಂದಿದ್ದೇನೆ. ಯಾವ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆ ಇರುತ್ತದೆಯೋ ಅಂತಹ ಜಿಲ್ಲೆಯಲ್ಲಿ ಉತ್ಕೃಷ್ಟವಾದ ಅರೋಗ್ಯ ಸೇವೆ ಸಿಗಲಿದೆ ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಕ್ಯಾನ್ಸರ್ ಮತ್ತು ತಾಯಿ, ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಉದಾರವಾಗಿ ಹಣ ಮಂಜೂರು ಮಾಡಿದ್ದಾರೆ‌. ಈ ಮೂರು ಆರೋಗ್ಯ ಸೇವೆಗಳು ಶೀಘ್ರ ಪ್ರಾರಂಭವಾಗಿ ಸೇವೆ ಲಭ್ಯವಾಗಲಿದೆ ಎಂದರು.

ಮುಖ್ಯಮಂತ್ರಿಗಳು ಜಿಲ್ಲೆಗೆ ಒಂದು ಪಿಜಿ ಸೆಂಟರ್ ಕೊಡಬೇಕು. ಇದರಿಂದ ಜಿಲ್ಲೆಯಲ್ಲಿ ಹೆಚ್ಚು ಸೇವೆ ಕೊಡಬಹುದಾಗಿದೆ. ಅಲ್ಲದೆ, ತಿಪಟೂರಿಗೆ ಸರ್ಕಾರಿ ಕಾಲೇಜು ಮಾಡಿಕೊಡಬೇಕು. ಇದಲ್ಲದೆ, ಜಿಲ್ಲೆಯಲ್ಲಿ ಕಾರ್ಡಿಯಾಲಜಿ ಆಸ್ಪತ್ರೆ ಮಾಡಲು ಮುಖ್ಯಮಂತ್ರಿ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಎಪ್ಪತ್ತೈದು ವರ್ಷ ಪೂರೈಸಿರುವ ಜಿಲ್ಲಾಸ್ಪತ್ರೆ ಹಂತ ಹಂತವಾಗಿ ನಿರ್ಮಾಣವಾಗಿ ಉತ್ತಮ ಆರೋಗ್ಯ ಸೇವೆ ನೀಡುತ್ತಾ ಬಂದಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣವಾಗುವುದರಿಂದ ಕ್ಯಾನ್ಸರ್ ರೋಗಿಗಳಿಗೆ ಜಿಲ್ಲೆಯಲ್ಲಿಯೇ ಸಿಗಲಿದೆ. ಬೆಂಗಳೂರಿಗೆ ಚಿಕಿತ್ಸೆಗಾಗಿ ಅಲೆಯುವ ಅನಿವಾರ್ಯ ತಪ್ಪಲಿದೆ. ಅಂತೆಯೇ, ಜಿಲ್ಲೆಯಲ್ಲಿ ತಿಂಗಳಿಗೆ ಸರಾಸರಿ ಸುಮಾರು 600 ಹೆರಿಗೆಗಳು ಆಗುತ್ತಿದ್ದು, ಪ್ರತ್ಯೇಕ ಮಕ್ಕಳ ಹಾಗೂ ತಾಯಿಯ ಆರೈಕೆಗಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಹಾಗೂ ಅಪೌಷ್ಟಿಕ ಪುನಶ್ಚೇತನ ಕೇಂದ್ರ ನಿರ್ಮಾಣವಾಗಲಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಅನುಷ್ಠಾನಗೊಳಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು, ವಿಧಾನ ಪಂತ್ ಪರಿಷತ್ ಸದಸ್ಯ ಚಿದಾನಂದ್, ಶಾಸಕರಾದ ರಾಜೇಶ್ ಗೌಡ, ಮೇಯರ್ ಬಿ.ಜಿ.‌ಕೃಷ್ಣಪ್ಪ, ಐಜಿ ಚಂದ್ರಶೇಖರ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಯಹ ಡಾ.ಕೆ.ವಿದ್ಯಾ ಕುಮಾರಿ ಸೇರಿದಂತೆ ಜಿಲ್ಲೆಯ ವಿವಿಧ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next