Advertisement

ಗ್ರಾಮೀಣ ಠಾಣೆ ಪ್ರಗತಿಗೆ ಆದ್ಯತೆ: ಪಂತ್‌

12:52 PM Mar 11, 2022 | Team Udayavani |

ವಾಡಿ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಹಂತ-ಹಂತವಾಗಿ ಗ್ರಾಮೀಣ ಪೊಲೀಸ್‌ ಠಾಣೆಗಳ ಪ್ರಗತಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ಹೇಳಿದರು.

Advertisement

ಪಟ್ಟಣದ ಪೊಲೀಸ್‌ ಠಾಣೆಗೆ ಗುರುವಾರ ಭೇಟಿ ನೀಡಿದ ಅವರು, ಕಟ್ಟಡದ ಸೌಂದರ್ಯೀಕರಣ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಠಾಣೆ ಆವರಣದಲ್ಲಿ ನಿರ್ಮಿಸಲಾದ ಪೇದೆ ಮಕ್ಕಳ ಶೆಟಲ್‌ ಕಾಕ್‌ ಕ್ರೀಡಾಂಗಣ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ವಾಡಿ ಠಾಣೆ ನವೀಕರಣ ಹೊಂದಲು ಪಿಎಸ್‌ಐ ಮಹಾಂತೇಶ ಕಾರಣರಾಗಿದ್ದಾರೆ. ಈ ಕಾರ್ಯ ಜಿಲ್ಲೆಯ ಇತರ ಪೊಲೀಸ್‌ ಠಾಣೆ ಅಧಿಕಾರಿಗಳಿಗೆ ಮಾದರಿಯಾಗಲಿದೆ. ಗ್ರಾಮೀಣ ಠಾಣೆಗಳನ್ನು ಜನಾಕರ್ಷಣೀಯ ಮಾಡಲು ಶ್ರಮಿಸೋಣ ಎಂದು ಅಧಿಕಾರಿಗಳಿಗೆ ಕರೆ ನೀಡಿದರು.

ಪೊಲೀಸ್‌ ವಸತಿ ಗೃಹಗಳ ದುಸ್ಥಿತಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಠಾಣೆಗಳ ಕಟ್ಟಡದ ಜತೆಗೆ ನಮ್ಮ ಸಿಬ್ಬಂದಿ ಗೃಹಗಳು ದುರಸ್ತಿ ಕಾಣಬೇಕಿದೆ. ವಾಡಿ ಪೊಲೀಸ್‌ ವಸತಿ ಗೃಹಗಳಲ್ಲಿನ ಸಮಸ್ಯೆಗಳು ಗಮನಕ್ಕೆ ಬಂದಿವೆ. ಇವುಗಳ ಜೀರ್ಣೋದ್ಧಾರಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಅಪ್ರೂವಲ್‌ಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.

ವಾಡಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಎರಡು ಕೊಲೆ ಪ್ರಕರಣಗಳು ನಡೆದಿವೆ. ಮೊದಲ ಪ್ರಕರಣದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಎರಡನೇ ಕೊಲೆ ಪ್ರಕರಣದ ಆರೋಪಿಗಳ ಸುಳಿವು ಸಿಕ್ಕಿದೆ. ಆದಷ್ಟು ಬೇಗ ಅವರನ್ನು ಬಂಧಿಸುತ್ತೇವೆ. ಮಟಕಾ, ಗಾಂಜಾ, ಜೂಜಾಟ ಸೇರಿದಂತೆ ಯಾವುದೇ ಅಪರಾಧ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಕಳೆದ ಎರಡು ತಿಂಗಳಲ್ಲಿ ಮಟಕಾ-ಜೂಜಾಟಕ್ಕೆ ಸಂಬಂಧಿಸಿದಂತೆ ಐದಾರು ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.

Advertisement

ಇದೇ ವೇಳೆ ಠಾಣೆ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಿದ ಎಸ್‌ಪಿ ಇಶಾ ಪಂತ್‌, ಪೊಲೀಸ್‌ ಸಿಬ್ಬಂದಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಹಿರಿಯ, ಕಿರಿಯ ಪೊಲೀಸ್‌ ಸಿಬ್ಬಂದಿಗಳಿಗೆ ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸಿದರು. ನಂತರ ಎರಡು ತಾಸು ಠಾಣೆಯಲ್ಲಿ ಕುಳಿತು ಕಡತಗಳನ್ನು ಪರಿಶೀಲಿಸಿದರು. ಶಹಾಬಾದ ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಐ ಮಹಾಂತೇಶ ಪಾಟೀಲ, ಕ್ರೈಂ ಪಿಎಸ್‌ಐ ಶಿವುಕಾಂತ ಕಮಲಾಪುರ, ಎಎಸ್‌ಐ ಅಶೋಕ ಕಟ್ಟಿ, ಚನ್ನಮಲ್ಲಪ್ಪ ಪಾಟೀಲ, ಶರಣಪ್ಪ ಜಾಂಜಿ, ಲಕ್ಷ್ಮಣ ಜಾನೆ ಇದ್ದರು.

ಆಳಂದ ಘಟನೆಗೆ ಸಂಬಂದಿಸಿದಂತೆ ಕಾನೂನು ಬದ್ಧವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡಿ ಶಾಂತಿ ನೆಲೆಸಲು ಸಕಲ ಕ್ರಮ ಕೈಗೊಂಡಿದ್ದೇನೆ. ಆದಾಗ್ಯೂ ನನ್ನ ವಿರುದ್ಧ ಟೀಕೆ, ಆರೋಪಗಳು ಕೇಳಿಬಂದರೆ ಪ್ರಜಾತಾಂತ್ರಿಕ ನೆಲೆಗಟ್ಟಿನಲ್ಲಿ ಅವುಗಳನ್ನು ಸ್ವೀಕರಿಸುತ್ತೇನೆ. ಆಳಂದ ಘಟನೆಗೆ ಸಂಬಂದಿಸಿದಂತೆ ಇದುವರೆಗೂ ನನಗೆ ಯಾರಿಂದಲೂ ಯಾವುದೇ ನೋಟಿಸ್‌ ಬಂದಿಲ್ಲ. -ಇಶಾ ಪಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next