ಹನೂರು: ಪಟ್ಟಣದ ಅಧಿದೇವತೆ ಬೆಟ್ಟಳ್ಳಿ ಮಾರಮ್ಮ ಜಾತ್ರೆಯಲ್ಲಿ ಭಕ್ತಾದಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಜನರ ಸಮಸ್ಯೆ ಆಲಿಸಲು ಪಟ್ಟಣ ಪಂಚಾಯ್ತಿಯಿಂದ ನಿಯಂತ್ರಣ ಕೊಠಡಿ ತೆರೆಯಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಎನ್.ಮೂರ್ತಿ ತಿಳಿಸಿದರು.
ಪಟ್ಟಣದ ಅಧಿದೇವತೆ ಬೆಟ್ಟಳ್ಳಿ ಮಾರಮ್ಮ ಜಾತ್ರೆಯ ಹಿನ್ನೆಲೆಯಲ್ಲಿ ನಡೆದ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವವು ಹನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರಿಗೆ ಬಹುಮುಖ್ಯವಾಗಿದೆ.
ಈ ಜಾತ್ರಾ ಮಹೋತ್ಸವದಲ್ಲಿ ಪಟ್ಟಣದ 13 ವಾರ್ಡ್‌ಗಳ ಸಾರ್ವಜನಿಕರಿಗೆ ಮತ್ತು ಭಕ್ತಾದಿಗಳಿಗೆ ಯಾವುದೇ ಕುಂದು ಕೊರತೆ ಉಂಟಾಗದ ರೀತಿಯಲ್ಲಿ ಕ್ರಮವಹಿಸಲಾಗುತ್ತಿದೆ. ಅಲ್ಲದೆ, ಪಟ್ಟಣ ವಾಸಿಗಳು ಮತ್ತು ಭಕ್ತಾದಿಗಳ ಕುಂದು ಕೊರತೆ ಮತ್ತು ಸಮಸ್ಯೆಗಳನ್ನು ತಿಳಿದು, ಸಮಸ್ಯೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಿಯಂತ್ರಣ ಕೊಠಡಿಯನ್ನು ತೆರೆಯಲಾಗುತ್ತಿದೆ. ಪಟ್ಟಣ ವಾಸಿಗಳು ಮತ್ತು ಭಕ್ತಾದಿಗಳು ಕುಂದು ಕೊರತೆಗಳು ಇದ್ದಲ್ಲಿ ದೂ.ಸಂ 08224-268111ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.
ಸ್ವಚ್ಛತೆಗೆ ಆದ್ಯತೆ ನೀಡಿ: ಪ.ಪಂ ಸದಸ್ಯರು ಮಾತನಾಡಿ, ಈ ಜಾತ್ರಾ ಮಹೋತ್ಸವವು 4 ದಿನಗಳ ವಿಜೃಂಭಣೆಯಿಂದ ನಡೆಯಲಿದೆ. ಹೀಗಾಗಿ ಪಟ್ಟಣದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೋರದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲಾ ವಾರ್ಡ್‌ಗಳ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಪಟ್ಟಣದ ಬೀದಿ ದೀಪಗಳ ಸಮಗ್ರ ನಿರ್ವಹಣೆ ಮಾಡಬೇಕು. ಕಿರು ನೀರು ಸರಬರಾಜು ಯೋಜನೆಯ ತೊಂಬೆಗಳನ್ನು ಶುಚಿಗೊಳಿಸಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಹೆಚ್ಚಿನ ಪೌರ ಕಾರ್ಮಿಕರನ್ನು ನಿಯೋಜಿಸಿ: ಜಾತ್ರಾ ಮಹೋತ್ಸವದ ಧಾರ್ಮಿಕ ಪೂಜಾ ಕೈಂಕರ್ಯಗಳಲ್ಲಿ ಸಹಸ್ರಾರು ಜನರು ಭಾಗವಹಿಸುವ ಹಿನ್ನೆಲೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಹೆಚ್ಚಿನ ಪೌರ ಕಾರ್ಮಿಕರನ್ನು ನಿಯೋಜಿಸಿ ಶುಚಿತ್ವ ಕಾಪಾಡಬೇಕು. ಆಂಜನೇಯ ಸ್ವಾಮಿ ದೇವಾಲಯದಿಂದ ದೊಡ್ಡ ಬಾಯಿಬೀಗ ಹಾದುಹೋಗುವ ಹಿನ್ನೆಲೆ ರಸ್ತೆಯ ಇಕ್ಕೆಲಗಳಲ್ಲಿ ಜಂಗಲ್ ಕಟಿಂಗ್ ಮಾಡಿ ತಾತ್ಕಾಲಿಕ ರಸ್ತೆಯನ್ನು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಪಪಂ ಸದಸ್ಯರಾದ ಹರೀಶ್‌ಕುಮಾರ್, ಸಂಪತ್ ಕುಮಾರ್, ಗಿರೀಶ್, ನಾಗರಾಜು, ರೂಪ, ಮುಮ್ತಾಜ್ ಭಾನು, ಮಹೇಶ್ ನಾಯ್ಕ, ಪವಿತ್ರ, ಮಂಜುಳಾ, ಮಹೇಶ್, ಆನಂದ್ ಕುಮಾರ್, ಪ.ಪಂ ಪ್ರಭಾರ ರಾಜಸ್ವ ನಿರೀಕ್ಷಕ ಮನಿಯಾ, ಆರೋಗ್ಯಾಧಿಕಾರಿ ಮಾದೇಶ ಹಾಜರಿದ್ದರು.