Advertisement

ಕೈಗಾರಿಕೆ ಅಭಿವೃದ್ಧಿ, ಸುರಕ್ಷತೆಗೆ ಆದ್ಯತೆ ನೀಡಿ

09:17 PM Nov 04, 2019 | Lakshmi GovindaRaju |

ಮೈಸೂರು: ಕೈಗಾರಿಕೆಗಳ ಅಭಿವೃದ್ಧಿ ಮತ್ತು ಸುರಕ್ಷತೆಗೆ ಕೇಂದ್ರ ಶಾಸನ ಕಾಯಿದೆ ಅಳವಡಿಕೆ ಅಗತ್ಯವಾಗಿದೆ ಎಂದು ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಆರೋಗ್ಯ ಮತ್ತು ಸುರಕ್ಷತೆ ನಿವೃತ್ತ ನಿರ್ದೇಶಕ ಡಿ.ಸಿ.ಜಗದೀಶ್‌ ಹೇಳಿದರು. ನಗರದಲ್ಲಿ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ) ಆಯೋಜಿಸಿದ್ದ ಕೈಗಾರಿಕಾ ಆರೋಗ್ಯ, ಸುರಕ್ಷತೆಗೆ ಶಿಫಾರಸು ಮಾಡಲಾದ ಅಭ್ಯಾಸಗಳು ಮತ್ತು ಕಾರ್ಮಿಕ ವೇತನ ಸಂಹಿತೆ-2019 ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಅವಘಡ ನಡೆಯದಂತೆ ಎಚ್ಚರ ವಹಿಸಿ: ಸುರಕ್ಷತೆ ಬಗ್ಗೆ ಕಾರ್ಮಿಕರಲ್ಲಿನ ಜ್ಞಾನದ ಕೊರತೆಯಿಂದ ಅವಘಡ ಮತ್ತು ತೊಂದರೆಗಳು ಉಂಟಾಗುತ್ತವೆ. ಕಾರ್ಖಾನೆಗಳಲ್ಲಿ ಒದಗಿಸಬೇಕಾದ ಅಗತ್ಯ ಸುರಕ್ಷತೆಗಳ ಕುರಿತು ಕೇಂದ್ರ ಶಾಸನ ಕಾಯಿದೆ ಜಾರಿಯಲ್ಲಿದ್ದು, ಕಾರ್ಖಾನೆ ಆಡಳಿತ ವರ್ಗದವರು ಈ ಶಾಸನವನ್ನು ಅರ್ಥೈಸಿಕೊಂಡು ಅಳವಡಿಸಿಕೊಳ್ಳುವ ಮೂಲಕ ಅವಘಡಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

16.5 ಲಕ್ಷ ಕಾರ್ಮಿಕರಿದ್ದಾರೆ: ಕೈಗಾರಿಕೆಗಳಲ್ಲಿ ಸುರಕ್ಷತೆ ಬಹಳ ಗಂಭೀರವಾದ ವಿಚಾರವಾಗಿದೆ. ರಾಜ್ಯದಲ್ಲಿ ಸುಮಾರು 16.350 ಕಾರ್ಖಾನೆಗಳಿದ್ದು, 16.5ಲಕ್ಷ ಮಂದಿ ಕಾರ್ಮಿಕರಿದ್ದಾರೆ. ಕಾರ್ಖಾನೆಗಳಲ್ಲಿ ಉಪಯೋಗಿಸುವ ಉಪಕರಣ, ಅಪಾಯಕಾರಿ ರಾಸಾಯನಿಕ ವಸ್ತುಗಳು ಮತ್ತು ವಿಧಾನಗಳು ಸಂಕೀರ್ಣತೆಯಿಂದ ಕೂಡಿದ್ದು, ಕಾರ್ಮಿಕರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದರು.

ರಚನಾತ್ಮಕ ಕಾರ್ಯ ಕೈಗೊಳ್ಳಲಿ: ಪ್ರತಿ ವರ್ಷ ರಾಜ್ಯದಲ್ಲಿನ ಕಾರ್ಖಾನೆಗಳಲ್ಲಿ ಸುಮಾರು 50 ಮಂದಿ ಕಾರ್ಮಿಕರು ಅವಘಡಗಳಿಗೆ ತುತ್ತಾಗುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕಾದರೆ ಆಡಳಿತ ವರ್ಗ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರಬೇಕು. ಕಾರ್ಖಾನೆಗಳಲ್ಲಿ ಸಂಭವಿಸುವ ಅವಘಡಗಳಿಂದಾಗಿ ಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ತೊಂದರೆ ಉಂಟಾಗುತ್ತದೆ ಮತ್ತು ಕಾರ್ಖಾನೆಯ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದು ಹೇಳಿದರು.

ಕರೆನ್‌ ಲಿಬರ್ ಇಂಡಿಯಾ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಎನ್‌.ಎಸ್‌.ಗೋವಿಂದ ರಾಜು, ಕೇಂದ್ರದ ನೂತನ ಕಾರ್ಮಿಕ ಸಂಹಿತೆ-2019 ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕ ವಿಜಯಕುಮಾರ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಕಾಸಿಯಾ ಅಧ್ಯಕ್ಷ ರಾಜು, ಉಪಾಧ್ಯಕ್ಷ ಕೆ.ಬಿ.ಅರಸಪ್ಪ, ಎಂ.ಜಿ.ರಾಜಗೋಪಾಲ, ವಿಶ್ವನಾಥ್‌ ಗೌಡರ್‌, ಎಸ್‌.ನಾಗರಾಜು, ಸುರೇಶ್‌ ಕುಮಾರ್‌ ಜೈನ್‌, ಎನ್‌.ಸತೀಶ್‌, ಸಿ.ಎಂ.ಸುಬ್ರಮಣಿಯನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next