ಮೈಸೂರು: ಮಕ್ಕಳಿಗೆ ಶಾಲಾ ಹಂತದಲ್ಲೇ ಸಂವಿಧಾನದ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಪಠ್ಯದಲ್ಲಿ ಕಡ್ಡಾಯವಾಗಿ ಸಂವಿಧಾನದ ಮೂಲಭೂತ ತತ್ವಗಳನ್ನು ಮುದ್ರಿಸಬೇಕಿದೆ ಎಂದು ಪ್ರಗತಿಪರ ಚಿಂತಕಿ ಪ್ರೊ.ಚ.ಸರ್ವಮಂಗಳ ಹೇಳಿದರು.
ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ, ದಸಂಸ, ರಾಜ್ಯ ರೈತಸಂಘ ಹಾಗೂ ಯುವ ಪ್ರಗತಿಪರ ಚಿಂತಕರ ಸಂಘದಿಂದ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ನೆನಪಿನಲ್ಲಿ ಬಹುಸಂಸ್ಕೃತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮೂಲಭೂತವಾದದ ಕ್ರೌರ್ಯ: ನಮ್ಮ ಮುಂದಿನ ಸವಾಲು ಮತ್ತು ಸಾಧ್ಯತೆಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನಾವು ಏನನ್ನು ಹೇಳುತ್ತೇವೆ ಅದನ್ನು ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಂವಿಧಾನದ ಕೆಲವು ಮೂಲಭೂತ ತತ್ವಗಳನ್ನು ಸರಳವಾದ ಸೂಕ್ತಿ ಅಥವಾ ಮಂತ್ರರೂಪದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಬೇಕಿದೆ ಎಂದು ಹೇಳಿದರು.
ಗೌರಿ ಲಂಕೇಶ್ ಬಹುಸಂಸ್ಕೃತಿ ಪ್ರತೀಕವಾಗಿದ್ದು, ಸಮಾಜದಲ್ಲಿ ರೈತರು, ಮಹಿಳೆಯರು, ಮಕ್ಕಳು, ನಕ್ಸಲರು ಸೇರಿದಂತೆ ಎಲ್ಲಾ ವರ್ಗದ ಜನರ ದನಿಯಾಗಿದ್ದರು. ಆಕೆ ಸಾವಿನ ವಿರುದ್ಧವಾಗಿ ನಡೆದ ಹೋರಾಟದಲ್ಲಿ ಸ್ವಯಂಪ್ರೇರಿತವಾಗಿ ಸಾಗರೋಪಾದಿಯಲ್ಲಿ ಬಂದಿದ್ದ ಅಪಾರ ಸಂಖ್ಯೆ ಜನರೇ ಸಾಕ್ಷಿಯಾಗಿದ್ದಾರೆಂದರು.
ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ವಿಚಾರ ಮಂಡನೆ ಮಾಡಿದರು. ಶಾಸಕ ಹಾಗೂ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರಕುಮಾರ್,
ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಹೊಸಕೋಟೆ ಬಸವರಾಜು, ಯುವ ಪ್ರಗತಿಪರ ಚಿಂತಕರ ಸಂಘದ ಅಧ್ಯಕ್ಷ ಬಿ.ಶಿವಶಂಕರ್, ನಿವೃತ್ತ ಪ್ರಾಂಶುಪಾಲ ಪ್ರೊ.ಹುಲ್ಕೆರೆ ಮಹಾದೇವ್ ಇದ್ದರು.