ಮಾಸ್ತಿ: ವಸತಿ ಶಾಲೆ ಮಕ್ಕಳಿಗೆ ನೀಡಬೇಕಿದ್ದ ಆಹಾರ ಪದಾರ್ಥಗಳನ್ನು ರಾತ್ರೋ ರಾತ್ರಿ ಟೆಂಪೋ ಮೂಲಕ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಮಂಜುನಾಥ್ ಸಾಗಿಸುತ್ತಿದ್ದ ವೇಳೆ ಗ್ರಾಮಸ್ಥರಿಗೆ ಸಿಕ್ಕಿ ಬಿದ್ದ ಘಟನೆ ಶುಕ್ರವಾರ ರಾತ್ರಿ ಸುಮಾರು 11.45 ರ ವೇಳೆ ನಡೆದಿದೆ. ಈ ಸಂಬಂಧ ಕೋಲಾರ ಜಿಪಂ ಸಿಇಒ ಜಗದೀಶ್ ಅಕ್ರಮ ಸಾಬೀತಾದರೆ ಪ್ರಕರಣ ದಾಖಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಎಚ್.ಎಸ್.ಸಿಂಧು ಅವರಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಂಶುಪಾಲ ಮಂಜುನಾಥ್‌ರನ್ನು ಅಮಾನತು ಮಾಡಲಾಗಿದೆ.
ಘಟನೆ ವಿವರ: ಮಾಸ್ತಿ ಹೋಬಳಿ ರಾಜೇನಹಳ್ಳಿ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸುಮಾರು 95 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಭಾರ ಪ್ರಾಂಶುಪಾಲರಾಗಿದ್ದ ಮಂಜುನಾಥ್ ರಾಗಿ, ಅಕ್ಕಿ, ಬೇಳೆ, ಮೈದಾ, ಕಡಲೇಬೀಜ, ರವೆ, ಸಕ್ಕರೆ ಸೇರಿದಂತೆ ಸುಮಾರು ಅಂದಾಜು 25 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಆಹಾರ ಪದಾರ್ಥಗಳನ್ನು ಟಾಟಾ ಎಸಿ ಟೆಂಪೋದಲ್ಲಿ ಶುಕ್ರವಾರ ರಾತ್ರಿ ಸುಮಾರು 11.45 ರ ಸಮಯದಲ್ಲಿ ಬೇರೆಡೆಗೆ ಸಾಗಿಸುತ್ತಿದ್ದರು. ಈ ವೇಳೆ ರಾಜೇನಹಳ್ಳಿ ಗ್ರಾಮಸ್ಥರು, ಟೆಂಪೋ ತಡೆದು ಮಾಸ್ತಿ ಪೊಲೀಸರಿಗೆ ಹಾಗೂ ಜಿಲ್ಲಾ ಜಂಟಿ ನಿರ್ದೇಶಕರಿಗೆ ಮಾಹಿತಿ ನೀಡಿದರು.
ವಿಷಯ ತಿಳಿದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಹಾಯಕ ನಿರ್ದೇಶಕರು ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಎಚ್.ಎಸ್.ಸಿಂಧು ಶನಿವಾರ ಬೆಳೆಗ್ಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ವಿಚಾರಣೆ ನಡೆಸಿದಾಗ ಪ್ರಾಂಶುಪಾಲ ಮಂಜುನಾಥ್ ತಪ್ಪೊಪ್ಪಿಕೊಂಡರು. ಈ ವೇಳೆ ತಮ್ಮ ಊರಾದ ಚಿಂತಾಮಣಿ ತಾಲೂಕಿನ ಬಿಲ್ಲಾಂಡಹಳ್ಳಿಗೆ ಪದಾರ್ಥಗಳನ್ನು ತೆಗೆದು ಕೊಂಡು ಹೋಗುತ್ತಿರುವುದಾಗಿ ಒಪ್ಪಿಕೊಂಡರು. ಹೀಗಾಗಿ ಸಿಇಒ ಆದೇಶದ ಮೇರೆಗೆ ಪ್ರಭಾರ ಪ್ರಾಂಶುಪಾಲ ಮಂಜುನಾಥ್‌ರನ್ನು ಅಮಾನತುಪಡಿಸಿ ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಾತಿನ ಚಕಮಕಿ: ವಕೀಲ ಕುಪ್ಪೂರು ಈಶ್ವರ್ ಮಾತನಾಡಿ ಇತ್ತೀಚಿಗಷ್ಟೆ ಕಿತ್ತೂರು ರಾಣಿ ವಸತಿ ಶಾಲೆಯಲ್ಲಿ ಊಟದಲ್ಲಿ ವ್ಯತ್ಯಾಸವಾಗಿ ಮಕ್ಕಳು ಅಸ್ವಸ್ಥರಾಗಿದ್ದರು. ಘಟನೆ ಮಾಸುವ ಮುನ್ನವೇ ಇಂತಹ ಅಕ್ರಮ ಘಟನೆ ನಡೆದಿದೆ. ಜಿಲ್ಲೆಯ ಅಧಿಕಾರಿಯಾಗಿ ಏನು ಕ್ರಮ ತೆಗೆದುಕೊಂಡಿದ್ದೀರಿ, ವಸತಿ ಶಾಲೆಯಿಂದ ಜಂಟಿ ನಿರ್ದೇಶಕರಿಗೆ 25 ಸಾವಿರ ರೂ.ಮಾಮೂಲಿ ಹೋಗುತ್ತಿದೆ ಎಂದು ಕೇಳಿ ಬರುತ್ತಿದೆ ಎಂದು ಹೇಳಿದಾಗ, ಜಂಟಿ ನಿರ್ದೇಶಕಿ ಎಚ್.ಎಸ್.ಸಿಂಧು ಸಿಟ್ಟಾದರು.
ಈ ವೇಳೆ ಅಧಿಕಾರಿ ಸಿಂಧು ಹಾಗೂ ವಕಿಲ ಕುಪ್ಪೂರು ಈಶ್ವರ್, ದಲಿತ ಮುಖಂಡರಾದ ದೊಡ್ಡಕಲ್ಲಹಳ್ಳಿ ವೆಂಕಟೇಶ್, ಓಜರಹಳ್ಳಿ ಮುನಿಯಪ್ಪ, ಲಕ್ಷ್ಮೀ ನಾರಾಯಣ್ ಮತ್ತಿತರರು ಪ್ರತಿಭಟನೆ ನಡೆಸಿದರು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಹಾಯಕ ನಿರ್ದೇಶಕ ಬಸವರಡದಡ್ಡೆಪ್ಪ ರೋಣದ ಅವರು ಸಮಾಧಾನ ಪಡಿಸಿದರೂ ಜಗ್ಗಲಿಲ್ಲ. ನಂತರ ಮಾಸ್ತಿ ಠಾಣೆ ಪಿಎಸ್‌ಐ ವಸಂತ್ ಮತ್ತಿತರ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.
ಈ ಮುನ್ನ ತಾಪಂ ಇಒ ಆನಂದ್ ಭೇಟಿ ನೀಡಿ ಪರಿಶೀಲಿಸಿ ವಿಚಾರಣೆ ನಡೆಸಿದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಿವಕುಮಾರ್ ಸೇರಿದಂತೆ ತಾಲೂಕು ಹಾಗೂ ಜಿಲ್ಲೆಯ ಅಧಿಕಾರಿಗಳು ಭೇಟಿ ನೀಡಿದ್ದರು. ವಸತಿ ಶಾಲೆಯ ಮಕ್ಕಳಿಗೆ ನೀಡಬೇಕಿದ್ದ ಆಹಾರ ಪದಾರ್ಥಗಳನ್ನು ಟೆಂಪೋ ಮೂಲಕ ಸಾಗಿಸುತ್ತಿದ್ದ ಪ್ರಾಂಶುಪಾಲ ಮಂಜುನಾಥ್, ಅವರ ಸೋದರ ಬಿ.ವಿ.ಪ್ರಕಾಶ್, ಚಾಲಕ ಭಾಸ್ಕರ್ ವಿರುದ್ಧ ಮಾಸ್ತಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.