ಉಡುಪಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನು ಈಗಿನ ಪ್ರಧಾನಿ ನರೇಂದ್ರ ಮೋದಿಯವರು ವೃದ್ಧಿಸಿದ್ದಾರೆ. ಅನ್ಯ ರಾಷ್ಟ್ರಗಳು ಶಿಷ್ಟಾಚಾರವನ್ನು ಬದಿಗೊತ್ತಿ ವಿಶೇಷವಾಗಿ ಪ್ರಧಾನಿಯವರನ್ನು ಸ್ವಾಗತಿಸುತ್ತಿವೆ. ಕೆಲ ರಾಷ್ಟ್ರಗಳು ಮೋದಿ ಬರಲು ಕಾಯುತ್ತಿವೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಂಗಳವಾರ ಬಿಜೆಪಿ ನಗರ ಯುವಮೋರ್ಚಾ ವತಿಯಿಂದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿಯ ಕಾತ್ಯಾಯಿನಿ ಮಂಟಪದಲ್ಲಿ ನಡೆದ “ನಮನ’ ಸಾಂಸ್ಕೃತಿಕ ಸೌರಭ, ಸಾಮೂಹಿಕ ಸಹಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಕ್ಷಗಳ ಅಂಗಸಂಸ್ಥೆಗಳಿಂದ ರಾಜಕೀಯ ಮಾತ್ರವಲ್ಲದೆ ಸಮಾಜಮುಖೀ ಕಾರ್ಯಗಳಾಗಬೇಕು. ಸ್ವಾತಂತ್ರ್ಯ ಹೋರಾಟಗಾರರು, ಬಲಿದಾನ ಮಾಡಿದವರು ಮತ್ತು ಗಡಿ ಕಾಯುತ್ತಿರುವ ಸೈನಿಕರನ್ನು ಸದಾ ಕಾಲ ನೆನೆಯುತ್ತಿರಬೇಕು. ಭಾರತ ವಿಶ್ವಗುರುವಿನ ಸ್ಥಾನಕ್ಕೆ ಸಮೀಪಿಸುತ್ತಿದ್ದಂತೆಯೇ ಶತ್ರು ರಾಷ್ಟ್ರಗಳಾದ ಪಾಕಿಸ್ಥಾನ, ಚೀನಾದ ಕುತಂತ್ರಗಳು ಹೆಚ್ಚುತ್ತಲಿವೆ. ಈ ಸವಾಲನ್ನು ಭಾರತ ಬಲಿಷ್ಠವಾಗಿಯೇ ಎದುರಿಸುತ್ತಿದೆ. ಮಾತಿನ ಯುದ್ಧವನ್ನು ಪದೇ ಪದೇ ಸಾರುತ್ತಿರುವ ಚೀನಾದ ಆರ್ಥಿಕತೆಗೆ ಹೊಡೆತವನ್ನು ನಾವು ಕೊಡಲೇಬೇಕಿದೆ. ಈ ನಿಟ್ಟಿನಲ್ಲಿ ಚೀನಾ ಉತ್ಪಾದಿತ ವಸ್ತುಗಳನ್ನು ಸ್ವಯಂಪ್ರೇರಿತವಾಗಿ ಬಹಿಷ್ಕರಿಸಬೇಕು ಎಂದು ರಘುಪತಿ ಭಟ್ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಎ. ಸುವರ್ಣ, ಯುವಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಶ ನಾಯಕ್, ನಗರಾಧ್ಯಕ್ಷ ಪ್ರಭಾಕರ ಪೂಜಾರಿ, ಯುವಮೋರ್ಚಾದ ರಂಜಿತ್ ಎಚ್. ಸಾಲ್ಯಾನ್, ದೀಪಕ್ ಶೇಟ್ ಉಪಸ್ಥಿತರಿದ್ದರು.ಅಧ್ಯಕ್ಷತೆ ವಹಿಸಿದ್ದ ನಗರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅಕ್ಷಿತ್ ಶೆಟ್ಟಿ ಸ್ವಾಗತಿಸಿದರು. ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.