Advertisement
ಇದು ನಿಜಕ್ಕೂ ಬಲಿಷ್ಠ ಸಂದೇಶವೇ ಸರಿ. ಆದರೆ ಈ ಮಾತು ಜಾಗತಿಕ ಸಮುದಾಯಕ್ಕೆ ಅಷ್ಟೇನೂ ಅಚ್ಚರಿ ಹುಟ್ಟಿಸುತ್ತಿಲ್ಲ ಎನ್ನುವುದು, ಪ್ರಧಾನಿಗಳ ಮಾತಲ್ಲಿ ಸತ್ಯವಿದೆ ಎನ್ನುವುದನ್ನು ಸಾರುತ್ತದೆ.
Related Articles
Advertisement
ವಿಶ್ವಸಂಸ್ಥೆಯ ಶಾಂತಿ ಪಾಲನೆ ಪಡೆ, ಭದ್ರತಾ ಮಂಡಳಿ, ಮಾನವ ಹಕ್ಕುಗಳ ಆಯೋಗದ ನಡೆಗಳು ಎಲ್ಲೆಡೆ ಒಂದೇ ತೆರನಾಗಿರುವುದಿಲ್ಲ. ಉದಾಹರಣೆಗೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಹಿಂಸಾಕಾಂಡವನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಅಕ್ಷರಶಃ ವಿಫಲವಾಗುತ್ತಲೇ ಬಂದಿದೆ. ಅನ್ಯ ದೇಶಗಳಲ್ಲಿ ಸ್ವಲ್ಪ ಕುಂದುಕೊರತೆಗಳು ಕಂಡರೂ ಕಠಿನ ನಿಲುವು ತಾಳುವ ಯುನೆಸ್ಕೋ ವಿಚಾರಕ್ಕೆ ಬಂದರೆ, ಅದು ಮಧ್ಯಪ್ರಾಚ್ಯದಲ್ಲಿ ಉಗ್ರರಿಂದ ಪಾರಂಪರಿಕ ತಾಣಗಳ ನೆಲಸಮವಾದರೂ, ಬಾಯಿಮಾತಿನ ಖಂಡನೆಗಷ್ಟೇ ತನ್ನ ಜವಾಬ್ದಾರಿಯನ್ನು ಇಳಿಸಿಕೊಂಡುಬಿಡುತ್ತದೆ. ಸಾವಿರಾರು ಜನ ಐಸಿಸ್‌ನಂಥ ಉಗ್ರ ಸಂಘಟನೆಗಳಿಗೆ ಬಲಿಯಾದರೂ ಲಕ್ಷಾಂತರ ಜನ ನೆಲೆ ಕಳೆದುಕೊಂಡು ವಲಸೆ ಹೋದರೂ ಮಾನವ ಹಕ್ಕುಗಳ ಆಯೋಗ ಹೆಚ್ಚು ಮಾತನಾಡುವುದೇ ಇಲ್ಲ.
ಕಾಶ್ಮೀರದಲ್ಲಿ ಪಾಕ್ ಪೋಷಿತ ಉಗ್ರರಿಂದ ಸಾವುನೋವು ಸಂಭವಿಸಿದರೂ, ಈ ವಿಚಾರದಲ್ಲಿ ವಿಶ್ವಸಂಸ್ಥೆಯ ಮನ ಅಷ್ಟಾಗಿ ಮಿಡಿಯುವುದಿಲ್ಲ. ಒಟ್ಟಲ್ಲಿ ಕೇವಲ ಅಂಕಿಸಂಖ್ಯೆಗಳನ್ನು ಎದುರಿಡುವುದೇ ತಮ್ಮ ಕೆಲಸ ಎಂದು ಈ ಸಂಸ್ಥೆಯ ಅಂಗಗಳು ಭಾವಿಸಿವೆ. ವಿಶ್ವಸಂಸ್ಥೆಯ ಪರಿಹಾರ, ಪುನರ್ವಸತಿ ವಿಭಾಗದ ಕೆಲಸವೂ ಹೇಳಿಕೊಳ್ಳುವಂತಿಲ್ಲ. ಅಲ್ಲಿ ಬರೀ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಿವಿಧ ರಾಷ್ಟ್ರಗಳು ಆರೋಪಿಸುತ್ತಲೇ ಬಂದಿವೆ. ಈ ಕಾರಣಕ್ಕಾಗಿಯೇ, ವಿಶ್ವಸಂಸ್ಥೆಯ ಸಂರಚನೆಯನ್ನೇ ಬದಲಿಸಿ, ಅದು ಒಂದೆರಡು ದೇಶಗಳ ಕಪಿಮುಷ್ಠಿಯಿಂದ ಮುಕ್ತವಾಗುವಂತೆ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಅಧಿಕವಾಗಿದೆ.