Advertisement

ಮೋದಿ, ಪುಟಿನ್‌ ಎದುರು ಬೆಳಗಿದ “ಹೊಂಗಿರಣ’

06:45 AM Oct 06, 2018 | Team Udayavani |

ಸಾಗರ: ಭಾರತ ಹಾಗೂ ರಷ್ಯಾ ನಡುವಿನ ಬಾಂಧವ್ಯ ವೃದ್ಧಿಯ ಬೆನ್ನಲ್ಲೇ ಸಾಗರದ ರೋಹಿತ್‌ ನೇತೃತ್ವದ ಹೊಂಗಿರಣ ತಂಡ, ಅಡಕೆ ಮರ ಹತ್ತಿ ಕೊನೆ ಕೊಯ್ಯುವ ರೋಬೋಟಿಕ್‌ ಯಂತ್ರದ ಸಂಶೋಧನೆ ಮಾಡಿ ಉಭಯ ನಾಯಕರ ಎದುರು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.

Advertisement

ರಷ್ಯಾ ಪ್ರಧಾನಿ ಪುಟಿನ್‌ ಭಾರತಕ್ಕೆ ಭೇಟಿ ನೀಡಿರುವ ಸಮಯದಲ್ಲೇ ರಷ್ಯಾ ಹಾಗೂ ಭಾರತದ ತಲಾ 10 ವಿದ್ಯಾರ್ಥಿಗಳು ಸೇರಿ ಎರಡೂ ದೇಶಗಳ ಪ್ರಧಾನಿ ಎದುರು ಶುಕ್ರವಾರ ಪ್ರಸ್ತುತಪಡಿಸಿದ ಸ್ಪೇಸ್‌ ಟೆಕ್‌ ಹಾಗೂ ಕ್ಲೀನ್‌ ಎನರ್ಜಿ ಪ್ರಾಜೆಕ್ಟ್‌ನಲ್ಲಿ ದಕ್ಷಿಣ ಭಾರತವನ್ನು ಸಾಗರದ ಹೊಂಗಿರಣ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಪ್ರತಿನಿಧಿಸಿ ಕರ್ನಾಟಕದ ಹೆಮ್ಮೆ ಹೆಚ್ಚಿಸಿದ್ದಾರೆ.

ನೀತಿ ಆಯೋಗದ ಅಡಿಯಲ್ಲಿ ಅಟಲ್‌ ಇನ್ನೋವೇಶನ್‌ ಮಿಷನ್‌ ಹಾಗೂ ದೆಹಲಿಯ ಐಐಟಿಯ ಡಿಪಾರ್ಟ್‌ಮೆಂಟ್‌ ಆಫ್‌ ಡಿಸೈನ್‌ ನೇತೃತ್ವದಲ್ಲಿ ಐದು ದಿನಗಳಿಂದ ವಿಶೇಷ ಕಾರ್ಯಾಗಾರ ದೆಹಲಿಯಲ್ಲಿ ನಡೆಯುತ್ತಿದೆ. ಉದ್ಯಮಶೀಲತೆ ಹಾಗೂ ಆವಿಷ್ಕಾರಗಳ ವಿಭಾಗದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮಾಡೆಲ್‌ಗ‌ಳನ್ನು ರೂಪಿಸಿ ಮೋದಿ ಹಾಗೂ ಪುಟಿನ್‌ ಮುಂದೆ ಪ್ರದರ್ಶಿಸಿದ್ದಾರೆ. ರಷ್ಯಾದ ಸೋಚಿ ಎಂಬಲ್ಲಿನ ಸಿರಿಸ್‌ ಕ್ರಿಯೇಟಿವ್‌ ಸ್ಕೂಲ್‌ನ ನಾಲ್ವರು ಹುಡುಗಿಯರು, 6 ಹುಡುಗರ ತಂಡ ಹಾಗೂ ಭಾರತದ ಎಐಎಂನ ಅಟಲ್‌ ಟಿಂಕರಿಂಗ್‌ ಲ್ಯಾಬ್‌ಗಳ 7 ಹುಡುಗಿಯರು ಹಾಗೂ ಮೂವರು ಹುಡುಗರು ಈ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ಭಾರತವನ್ನು ಪ್ರತಿನಿ ಧಿಸುತ್ತಿರುವ ಮೂವರು ಹುಡುಗರಲ್ಲಿ ಸಾಗರದ ಹೊಂಗಿರಣ ಸ್ಕೂಲ್‌ ಆಫ್‌ ಎಕ್ಸ್‌ಲೆನ್ಸ್‌ನ ದ್ವಿತೀಯ ಪಿಯುನ ತೇಜಸ್‌ ಹಾಗೂ ಗುರುದತ್ತ ಸೇರಿದ್ದಾರೆ.

ರಚಿಸಲಾಗಿರುವ ಐದು ತಂಡಗಳಲ್ಲಿ ತಲಾ ಇಬ್ಬರು ರಷ್ಯಾ, ಭಾರತದ ವಿದ್ಯಾರ್ಥಿಗಳಿದ್ದು ಎರಡೂ ದೇಶಗಳ ಇಬ್ಬರು ಮಾರ್ಗದರ್ಶಕರನ್ನು ಕೂಡ ಆಯ್ಕೆ ಮಾಡಲಾಗಿದೆ. ಭಾರತದ ಇಬ್ಬರಲ್ಲಿ ಹೊಂಗಿರಣದ ವಿಜ್ಞಾನ ಅಧ್ಯಾಪಕ ರೋಹಿತ್‌ ವಿ. ಕೂಡ ಒಬ್ಬರು. ಬಾಹ್ಯಾಕಾಶ, ಕೃಷಿ, ಸ್ವತ್ಛತೆ, ಆರೋಗ್ಯ, ಚಲನಶೀಲತೆ ಕುರಿತಾದ ಅಧ್ಯಯನ ಮಾಡೆಲ್‌ಗ‌ಳ ಸಂಶೋಧನೆಗೆ ಇಳಿದಿರುವ ತಂಡಗಳಲ್ಲಿ ಹಿಮಾಚಲ ಪ್ರದೇಶ, ಚತ್ತೀಸ್‌ಗಢ್‌ ಸೇರಿ ಉತ್ತರ ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳೂ ಇದ್ದಾರೆ. ದಕ್ಷಿಣ ಭಾರತದಿಂದ ಸಾಗರದ ವಿದ್ಯಾರ್ಥಿಗಳು ಮಾತ್ರ ಪ್ರತಿನಿಧಿಸಿದ್ದಾರೆ.

ಆಯ್ಕೆಯಾಗಿದ್ದು ಹೇಗೆ?:
2017ರ ಮೇನಲ್ಲಿ ನರೇಂದ್ರ ಮೋದಿ ರಷ್ಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಯೋಜನೆಗೆ ಚಾಲನೆ ಪಡೆದಿತ್ತು. ಟಿಕರಿಂಗ್‌ ಮ್ಯಾರಥಾನ್‌ಗೆ ದೇಶಾದ್ಯಂತ 6 ಸಾವಿರ ಅರ್ಜಿ ಬಂದಿದ್ದು, 2018ರ ಆರಂಭದಲ್ಲಿ ಟಾಪ್‌ 30ರ ಆಯ್ಕೆ ನಡೆದಿತ್ತು. ಇದರಲ್ಲಿ ಟಾಪ್‌ 5 ತಂಡಗಳು ಆಯ್ಕೆಯಾಗಿದ್ದು, ಅ.1ರಿಂದ 4ರವರೆಗೆ ನಡೆದ ಕ್ಯಾಂಪ್‌ಗೆ ದೆಹಲಿಗೆ ಬಂದಿದ್ದರು. ಇದೇ ಕ್ರಮ ರಷ್ಯಾ ಕಡೆಯಿಂದಲೂ ನಡೆದಿತ್ತು. ಸ್ಕೆçಪ್‌ ಸಂದರ್ಶನಗಳಿಂದ 30 ಪ್ರತಿಭೆಗಳನ್ನು ಆರಿಸಿ ಅವರಲ್ಲಿ ಅತ್ಯುತ್ತಮ 10 ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆ ತಂದಿದ್ದೇವೆ ಎಂದು ಅಲ್ಲಿನ ಸಿರಿಸ್‌ನ ಮಾರ್ಗದರ್ಶಕ ಕ್ರಿಸ್ಟಿನಾ ರಗುರೋಜಾ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಸಂಶೋಧನೆ ಏನೇನು?:
ರಷ್ಯಾದ ವಿದ್ಯಾರ್ಥಿಗಳು ಕ್ಯಾನ್ಸರ್‌ ಬಗ್ಗೆ ಸಂಶೋಧನೆ ನಡೆಸಿದ್ದರೆ, ಹಿಮಾಚಲದ ರೈನ್‌ಬೋ ಇಂಟರ್‌ನ್ಯಾಷನಲ್‌ ಶಾಲೆಯ 15 ವರ್ಷದ ಮನ್ನತ್‌ ಮೆಹ್ತಾ ಅವರು ಹೆಲ್ಮೆಟ್‌ ಧರಿಸದಿದ್ದರೆ ದ್ವಿಚಕ್ರ ವಾಹನ ಸ್ಟಾರ್ಟ್‌ ಆಗದೆ ಇರುವಂತ ತಾಂತ್ರಿಕತೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಸಾಗರದ ರೋಹಿತ್‌ ನೇತೃತ್ವದ ಹೊಂಗಿರಣ ತಂಡ ಅಡಕೆ ಮರವನ್ನು ಹತ್ತಿ ಕೊನೆ ಕೊಯ್ಯುವ ರೋಬೋಟಿಕ್‌ ಯಂತ್ರದ ಸಂಶೋಧನೆಯಲ್ಲಿ ತೊಡಗಿದ್ದಾರೆ.

ಏನಿದು ಅಟಲ್‌ ಟಿಂಕರಿಂಗ್‌ ಲ್ಯಾಬ್‌?
ಪ್ರಧಾನ ಮಂತ್ರಿ ಕಾರ್ಯಾಲಯ 2015ರಲ್ಲಿ ಅಟಲ್‌ ಇನ್ನೋವೇಶನ್‌ ಮಿಷನ್‌-ಎಐಎಂ ಆರಂಭಿಸಿತ್ತು. ಅದು ದೇಶದಲ್ಲಿ 5 ಸಾವಿರ ಅಟಲ್‌ ಟಿಂಕರಿಂಗ್‌ ಲ್ಯಾಬ್‌ಗಳನ್ನು ಶಾಲಾ ಮಟ್ಟದಲ್ಲಿ ಕಠಿಣ ಷರತ್ತುಗಳ ಅಡಿಯಲ್ಲಿ ಸ್ಥಾಪಿಸಿದೆ. ಈ ಲ್ಯಾಬ್‌ ಪಡೆದ ಪ್ರತಿ ಶಾಲೆಗೆ ಸ್ಥಾಪನೆಗೆ 10 ಲಕ್ಷ ಹಾಗೂ ಮುಂದಿನ ಐದು ವರ್ಷ ವಾರ್ಷಿಕ 2 ಲಕ್ಷ ರೂ. ಅನುದಾನ ಲಭಿಸುತ್ತದೆ. ಪ್ರಸ್ತುತ ಹೊಂಗಿರಣದ ಎಟಿಎಲ್‌ ಲ್ಯಾಬ್‌ ಕೂಡ ಕಾರ್ಯನಿರ್ವಹಣೆ ಆರಂಭಿಸಿರುವ 2 ಸಾವಿರ ಎಟಿಎಲ್‌ಗ‌ಳಲ್ಲಿ ಒಂದು. ಜನರು ಪ್ರತಿ ದಿನದ ಜೀವನದಲ್ಲಿ ಎದುರಿಸುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ವಿದ್ಯಾರ್ಥಿಗಳ ಬುದ್ಧಿವಂತಿಕೆಯನ್ನೇ ಬಳಸಿಕೊಳ್ಳಬಹುದು ಎಂಬ ಸೂತ್ರದಡಿಯಲ್ಲಿ ಅಟಲ್‌ ಇನ್ನೋವೇಶನ್‌ ಮಿಷನ್‌ ಕೆಲಸ ಮಾಡುತ್ತಿದೆ.

ಎರಡೂ ದೇಶಗಳ ಪ್ರಧಾನಿಗಳ ಎದುರು ಮಾಡೆಲ್‌ಗ‌ಳನ್ನು ಪ್ರದರ್ಶಿಸುವುದು ವಿಶಿಷ್ಟ ಅನುಭವ. ನಮ್ಮ ತಂಡ ಉತ್ತರ ಭಾರತದಲ್ಲಿ ಕೊಯ್ಲಿನ ನಂತರ ತ್ಯಾಜ್ಯವಾಗುವ ಜೋಳ, ಭತ್ತದ ಹುಲ್ಲನ್ನು ರೈತರು ಸುಡುವುದರಿಂದ ಪ್ರತಿ ವರ್ಷ ವಾಯು ಮಾಲಿನ್ಯದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರ ಬದಲು ಇವುಗಳಿಂದ ತಟ್ಟೆ, ಲೋಟಗಳನ್ನು ತಯಾರಿಸುವ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ನೀಡುತ್ತೇವೆ.
– ರೋಹಿತ್‌, ಮಾರ್ಗದರ್ಶಕ

– ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next