Advertisement

ನಾಳೆ ಕೆಂಪೇಗೌಡರ ಪ್ರತಿಮೆ ಅನಾವರಣ; ಪ್ರಧಾನಿ ನರೇಂದ್ರ ಮೋದಿ ಆಗಮನ

10:22 PM Nov 09, 2022 | Team Udayavani |

ಬೆಂಗಳೂರು: ನಾಲ್ಕೂವರೆ ತಿಂಗಳ ಅವಧಿಯಲ್ಲಿ 3ನೇ ಬಾರಿಗೆ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದು, ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವುದು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಉತ್ಸಾಹ ಮೂಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾಗಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮತ್ತು ಥೀಮ್‌ ಪಾರ್ಕ್‌ಗಳನ್ನು ಅವರು ಅನಾವರಣ ಮಾಡಲಿದ್ದಾರೆ.

Advertisement

ಈ ಹಿಂದೆ ಸಬರ್ಬನ್‌ ರೈಲು ಯೋಜನೆ, ಬೈಯ್ಯಪ್ಪನಹಳ್ಳಿ ರೈಲ್ವೇ ಟರ್ಮಿನಲ್‌ ಚಾಲನೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ದಕ್ಷಿಣ ಭಾಗದಲ್ಲಿ ಸಾರ್ವಜನಿಕ ಸಭೆ ನಡೆಸಿದ್ದ ಪ್ರಧಾನಿಯವರು ಈಗ ಉತ್ತರ ಭಾಗದಲ್ಲಿ ಸಭೆ ನಡೆಸಲಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌, ಕಾಶಿ ದರ್ಶನ, ವಂದೇ ಭಾರತ್‌ ರೈಲಿಗೆ ಚಾಲನೆ ಜತೆಗೆ ಕನಕ ಜಯಂತಿ ಪ್ರಯುಕ್ತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಶಾಸಕರ ಭವನ ಆವರಣದಲ್ಲಿರುವ ವಾಲ್ಮೀಕಿ ಪ್ರತಿಮೆಗೂ ಮಾಲಾರ್ಪಣೆ ಮಾಡಲಿದ್ದಾರೆ.

ಇತ್ತೀಚೆಗೆ ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ನಿಗದಿಗೊಳಿಸಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೋದಿ ಅವರ ಭೇಟಿ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚು ಶಕ್ತಿ ತುಂಬಲಿದೆ ಎಂದು ರಾಜ್ಯ ನಾಯಕರು ತಿಳಿಸಿದ್ದಾರೆ.

ಭರ್ಜರಿ ಸಿದ್ಧತೆ
ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಾರ್ವಜನಿಕ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಜಿಲ್ಲೆಯ ಜನರು ಭಾಗಿಯಾಗಲಿದ್ದಾರೆ.

Advertisement

ಪ್ರಧಾನಿ ಶುಕ್ರವಾರ ಮಧ್ಯಾಹ್ನ 12.10ಕ್ಕೆ ಐತಿಹಾಸಿಕ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದರ ಜತೆಗೆ ಅಂದು ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ ಲೋಕಾರ್ಪಣೆ, ವಂದೇ ಭಾರತ್‌ ಮತ್ತು ಭಾರತ್‌ ಗೌರವ್‌ ಕಾಶಿ ದರ್ಶನ ರೈಲುಗಳಿಗೆ ಹಸುರು ನಿಶಾನೆ ತೋರಿಸುವುದರ ಸಹಿತ ನಗರದ ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10ಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು 10.30ಕ್ಕೆ ರಸ್ತೆ ಮೂಲಕ ವಿಧಾನಸೌಧ ಆವರಣಕ್ಕೆ ಬಂದು ಶಾಸಕರ ಭವನದ ಬಳಿ ಇರುವ ಕನಕದಾಸ ಪ್ರತಿಮೆ ಹಾಗೂ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.

ಇದಾದ ಅನಂತರ 10.42ಕ್ಕೆ ರಸ್ತೆ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಮೆಜೆಸ್ಟಿಕ್‌)ಕ್ಕೆ ಆಗಮಿಸಿ ಚೆನ್ನೈಯಿಂದ ಮೈಸೂರಿಗೆ ಬೆಂಗಳೂರು ಮೂಲಕ ಹಾದುಹೋಗುವ “ವಂದೇ ಭಾರತ್‌’ ರೈಲಿಗೆ ಹಸುರು ನಿಶಾನೆ ತೋರಲಿದ್ದಾರೆ.

ಬೆಂಗಳೂರಿನಿಂದ ಕಾಶಿಗೆ ತೆರಳುವ “ಭಾರತ್‌ ಗೌರವ್‌ ಕಾಶಿ ದರ್ಶನ್‌’ ರೈಲಿಗೆ ಹಸುರು ನಿಶಾನೆ ತೋರಿದ ಅನಂತರ 11.20ಕ್ಕೆ ಹೆಬ್ಟಾಳದ ಏರ್‌ಫೋರ್ಸ್‌ ಕಮಾಂಡ್‌ ಸೆಂಟರ್‌ನಿಂದ ಹೆಲಿಕಾಪ್ಟರ್‌ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ 11.50ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ ಲೋಕಾರ್ಪಣೆ ಮಾಡಿ 12.10ಕ್ಕೆ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಮಾಡಲಿದ್ದಾರೆ.

ಮಧ್ಯಾಹ್ನ 12.50 ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲೇ ಬೆಂಗಳೂರು ಹೊರತುಪಡಿಸಿ ಎಲ್ಲ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರು ಪೂರೈಕೆಯ ದಾಹಮುಕ್ತ ಕರ್ನಾಟಕ ಯೋಜನೆ (ಅಮೃತ್‌ 2.0)ಗೆ ಚಾಲನೆ ನೀಡಲಿದ್ದಾರೆ.

ಮೋದಿ ಟ್ವೀಟ್‌ನಲ್ಲಿ ಬೆಂಗಳೂರು ಟರ್ಮಿನಲ್‌
ರಾಜ್ಯ ಭೇಟಿಗೂ ಮುನ್ನ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ 2ನೇ ಟರ್ಮಿನಲ್‌ನ ಫೋಟೋಗಳನ್ನು ತಮ್ಮ ಟ್ವೀಟ್‌ನಲ್ಲಿ ಹಾಕಿಕೊಂಡಿದ್ದಾರೆ.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ ಅದ್ಭುತ ದೃಶ್ಯಕಾವ್ಯ ಇಲ್ಲಿದೆ. ಇದು ವಿಮಾನ ನಿಲ್ದಾಣದ ಸಾಮರ್ಥ್ಯದ ವಿಸ್ತರಣೆಗೂ ಇಂಬು ನೀಡುತ್ತದೆ. ವಾಣಿಜ್ಯಿಕ್ಕೂ ಉತ್ತೇಜನ ನೀಡುತ್ತದೆ. ಟರ್ಮಿನಲ್‌ ಕಟ್ಟಡವು ಸುಸ್ಥಿರತೆಗೆ ಅತ್ಯುನ್ನತ ಪ್ರಾಮುಖ್ಯವನ್ನು ನೀಡುತ್ತದೆ ಎಂಬುದು ನನಗೆ ಸಂತಸ ತಂದಿದೆ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next