Advertisement

ಮಂಗಳೂರಿಗೆ ಪ್ರಧಾನಿ ಭೇಟಿ: ಗೋಲ್ಡ್‌ಫಿಂಚ್‌ ಮೈದಾನದಲ್ಲಿ ಸಮಾವೇಶ, ವ್ಯಾಪಕ ಸಿದ್ಧತೆ

08:38 AM Aug 25, 2022 | Team Udayavani |

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಸೆ. 2ರಂದು ಮಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ವ್ಯಾಪಕ ಸಿದ್ಧತೆ ಮಾಡಲಾಗುತ್ತಿದೆ. ಪ್ರಧಾನಿ ಯವರ ಸಾರ್ವಜನಿಕ ಸಮಾವೇಶಕ್ಕೆ ಗೋಲ್ಡ್‌ ಫಿಂಚ್‌ ಸಿಟಿ ಮೈದಾನದಲ್ಲಿ ತಯಾರಿ ಆರಂಭಿಸಲಾಗಿದೆ.

Advertisement

ಪ್ರಧಾನಿಯವರು ಬೆಳಗ್ಗೆ ಕೊಚ್ಚಿ ಶಿಪ್‌ ಯಾರ್ಡ್‌ನಲ್ಲಿ ದೇಶದ ಪ್ರಥಮ ಸ್ವದೇಶಿ ನಿರ್ಮಿತ ಐಎನ್‌ಎಸ್‌ ವಿಕ್ರಾಂತ್‌ ವಿಮಾನ ವಾಹಕ ನೌಕೆಯನ್ನು ಲೋಕಾರ್ಪಣೆ ಮಾಡಿ ಅಪರಾಹ್ನ 3.15ರ ವೇಳೆಗೆ ವಿಶೇಷ ವಿಮಾನದ ಮೂಲಕ ಬಜಪೆಗೆ, ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ನವಮಂಗಳೂರು ಬಂದರಿಗೆ ತೆರಳಿ 1,200 ಕೋ.ರೂ. ವೆಚ್ಚದ ಕಾಮಗಾರಿ ಲೋಕಾರ್ಪಣೆ ಹಾಗೂ ಸಾಗರಮಾಲಾದ ವಿವಿಧ ಯೋಜನೆ ಗಳಿಗೆ ಶಿಲಾನ್ಯಾಸ ನೆರವೇರಿಸುವರು.

4 ಗಂಟೆಗೆ ಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿ ಮೈದಾನಕ್ಕೆ ಆಗಮಿಸಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು. 5 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಹೊಸದಿಲ್ಲಿಗೆ ನಿರ್ಗಮಿಸಲಿದ್ದಾರೆ. ಅಧಿಕೃತ ಪ್ರವಾಸ ವೇಳಾಪಟ್ಟಿ ಒಂದೆರಡು ದಿನಗಳಲ್ಲಿ ಬರುವ ಸಾಧ್ಯತೆಗಳಿವೆ.

ಮೈದಾನದಲ್ಲಿ ಸಿದ್ಧತೆ
ಸಾರ್ವಜನಿಕ ಸಮಾವೇಶಕ್ಕೆ ಕೂಳೂರಿನ ರಾ.ಹೆ. 66ರ ಪಕ್ಕದಲ್ಲಿರುವ ಸುಮಾರು 100 ಎಕ್ರೆ ವಿಸ್ತಾರದ ಗೋಲ್ಡ್‌ಫಿಂಚ್‌ಸಿಟಿ ಮೈದಾನ ವನ್ನು ಸಜ್ಜುಗೊಳಿಸಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಡಾ| ಭರತ್‌ ಶೆಟ್ಟಿ ವೈ., ವೇದವ್ಯಾಸ ಕಾಮತ್‌, ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ, ಪೊಲೀಸ್‌ ಆಯುಕ್ತ ಎನ್‌. ಶಶಿ ಕುಮಾರ್‌, ಎನ್‌ಎಂಪಿಎ ಅಧ್ಯಕ್ಷ ಡಾ| ಎ.ವಿ. ರಮಣ, ಮಂಗಳೂರು ಎಸಿ ಮದನಮೋಹನ್‌, ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌ ಹಾಗೂ ಅಧಿಕಾರಿಗಳು ಬುಧವಾರ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಯ ಹಿನ್ನೆಲೆಯಲ್ಲಿ ಮೈದಾನದಲ್ಲಿ ಲಕ್ಷಾಂತರ ಮಂದಿ ಕುಳಿತುಕೊಳ್ಳುವ ಜಾಗಕ್ಕೆ ಶೀಟ್‌ಗಳ ಚಪ್ಪರ ಹಾಕುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಇದನ್ನೂ ಓದಿ : ಕರಾವಳಿಯಲ್ಲಿ ಬಿರುಸಿನ ಮಳೆ; ಅಲ್ಲಲ್ಲಿ ಹಾನಿ : ದ.ಕ., ಉಡುಪಿಯಲ್ಲಿ ಎಲ್ಲೋ ಅಲರ್ಟ್‌

Advertisement

ಇಂದು ಸಭೆ
ನವಮಂಗಳೂರು ಬಂದರು ಪ್ರಾಧಿಕಾರದ ವಿವಿಧ ಯೋಜನೆಗಳ ಉದ್ಘಾಟನೆಗೆ ಕಾರ್ಯ ಕ್ರಮಕ್ಕೆ ಪ್ರಧಾನಮಂತ್ರಿಗಳು ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಳ ಬಗ್ಗೆ ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಆ. 25ರಂದು ಬೆಳಿಗ್ಗೆ 9 ಗಂಟೆಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ಕರಾವಳಿಯಲ್ಲಿ ಸಂಚಲನ
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಪೂರಕವಾಗಿ ಪ್ರಧಾನಿಯವರ ಭೇಟಿಯನ್ನು ಕರಾವಳಿಯಲ್ಲಿ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದ್ದು ಲಕ್ಷಕ್ಕೂ ಅಧಿಕ ಮಂದಿಯನ್ನು ಸಮಾವೇಶಕ್ಕೆ ಕರೆ ತರಲು ಸಿದ್ಧತೆ ನಡೆಯುತ್ತಿದೆ. ಈ ಕುರಿತಂತೆ ಈಗಾಗಲೇ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಸಮಿತಿಗಳ ಸಭೆ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟದ ಸದಸ್ಯರು, ಕೇಂದ್ರ ಸಚಿವರು, ವರಿಷ್ಠ ನಾಯಕರು, ಮುಂಚೂಣಿ ಘಟಕಗಳ ನಾಯಕರು ಮಂಗಳೂರಿಗೆ ಆಗಮಿಸಲಿದ್ದಾರೆ.

ದ.ಕ. ಮಾತ್ರವಲ್ಲದೆ ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಗಳಿಂದ ಪಕ್ಷದ ಮುಂಚೂಣಿ ಘಟಕದ ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು ಗಣನೀಯ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next