ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36,042 ಅಂತರದ ನನ್ನ ಲೀಡ್ ಕಂಡು ಪ್ರಧಾನಿ ನರೇಂದ್ರ ಮೋದಿಯೇ ನಡುಗಿ ಹೋಗಿದ್ದರು.ಭಾರತದ ಭೂಪಟದಲ್ಲಿ ಈ ಚುನಾವಣೆಯನ್ನು ದಾಖಲಿಸಿದ್ದೀರಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮತದಾರರಿಗೆ, ಕಾರ್ಯಕರ್ತರಿಗೆ ಸ್ವಕ್ಷೇತ್ರದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಲಿಂಗದೇವರ ಕೊಪ್ಪಲಿನಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯಲ್ಲಿ ಜಿ.ಟಿ.ದೇವೇಗೌಡ ಅವರು ಸುಧೀರ್ಘ ಭಾಷಣ ಮಾಡಿ ಈ ಹೇಳಿಕೆ ನೀಡಿದ್ದಾರೆ.
ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದ ನನ್ನನ್ನು, ಸೊಸೈಟಿಯಲ್ಲಿ ಅಕ್ಕಿ ತೂಕ ಮಾಡಿಕೊಂಡಿದ್ದ ನನ್ನನ್ನು ಈ ಸ್ಥಾನದಲ್ಲಿ ನಿಲ್ಲಿಸಿದ್ದೀರಿ ನಿಮ್ಮ ಪಾದ ಪೂಜೆ ಮಾಡಿ ನಾನು ಋಣ ತೀರಿಸಬೇಕಾಗಿದೆ ಎಂದರು.
ಚಾಮುಂಡೇಶ್ವರಿ ಜನ 5 ವರ್ಷ ಬಹಳ ಕಷ್ಟ ಪಟ್ಟಿದ್ದಾರೆ. ಬಹಳ ಮಂದಿ ಕೇಸ್ ಹಾಕಿಸಿಕೊಂಡಿದ್ದಾರೆ. ಕೆಲವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಹೇಳಿ ಕಿರುಕುಳ ನೀಡಿದ್ದಾರೆ, ನಮ್ಮ ಜನರಿಗೆ ಕೊಡಬಾರದ ಕಷ್ಟ ಕೊಟ್ಟಿದ್ದಾರೆ. ಪಂಚಾಯತ್ ಸದಸ್ಯರಲ್ಲದವರೂ ಬಂದು ಹಾರೆ ಹಿಡಿದು ಗುದ್ದಲಿ ಪೂಜೆ ಮಾಡಿದ್ದಾರೆ. ಮನೆಯ ಒಳಗೆ ಕಣ್ಣೀರು ಹಾಕಿದ್ದೆ, ಜನರಿಗೆ ತೋರಿಸಿಕೊಳ್ಳಲಿಲ್ಲ. ಎಲ್ಲವನ್ನೂ ಸಹಿಸಿಕೊಂಡಿದ್ದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ 25,000 ಕ್ಕೂ ಹೆಚ್ಚು ಬೆಂಬಲಿಗರಿಗೆ ಭರ್ಜರಿ ಬಾಡೂಟವನ್ನು ಬಡಿಸಲಾಯಿತು.