ನವದೆಹಲಿ: ದೇಶಾದ್ಯಂತ 15 ದಿನಗಳ ಕಾಲ ನಡೆಯಲಿರುವ “ಸ್ವಚ್ಛತೆಯೇ ಸೇವೆ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ. ದೇಶದ ಹಲವು ಗಣ್ಯರೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ನಂತರ ಸಾಮಾನ್ಯ ಟ್ರಾಫಿಕ್‌ನಲ್ಲೇ ಬೆಂಗಾವಲು ಪಡೆಯೊಂದಿಗೆ ಸಾಗಿ, ಪಹರ್‌ಗಂಜ್‌ನಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೈಯರ್ ಸೆಕೆಂಡರಿ ಶಾಲೆಯ ಮೈದಾನವನ್ನು ಸ್ವಚ್ಛಗೊಳಿಸಿದ್ದಾರೆ.
ಶಾಲೆ ಆವರಣಕ್ಕೆ ತೆರಳಿದ ತಕ್ಷಣ ಶಾಲೆಯಲ್ಲಿದ್ದ ಅಂಬೇಡ್ಕರ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ, ಶಾಲೆಯ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಮನವರಿಕೆ ಮಾಡಿದರು. ನಂತರ ಕೈಯಿಂದಲೇ ಕಾಗದದ ಚೂರುಗಳು ಹಾಗೂ ಗಾಜಿನ ತುಂಡುಗಳನ್ನು ಎತ್ತಿ ಹಾಕಿದ್ದೂ ಕಂಡುಬಂತು.
ಇವರೊಂದಿಗೆ ಕೇಂದ್ರ ಸಚಿವರು, ಬಿಜೆಪಿ ನಾಯಕರು ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರೂ ಜೊತೆಗೂಡಿದರು. ಅಷ್ಟೇ ಅಲ್ಲ, ವಿವಿಧ ಸಚಿವರು ವಿವಿಧೆಡೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ತೆಲಂಗಾಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಫರೀದಾಬಾದ್‌ನಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್, ಪಟನಾದಲ್ಲಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸೇರಿದಂತೆ ಇತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಏನಿದು ಸ್ವಚ್ಛತೆಯೇ ಸೇವೆ ಕ್ಯಾಂಪೇನ್?
2018ರ ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಹಾಗೂ ಸ್ವಚ್ಛ ಭಾರತ ಯೋಜನೆ ಆರಂಭಿಸಿ 4ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಹದಿನೈದು ದಿನಗಳ ಸ್ವಚ್ಛತಾ ಹಿ ಸೇವಾ ಕ್ಯಾಂಪೇನ್ ಆರಂಭಿಸಲಾಗಿದೆ. ಇದು ಸೆ. 15 ರಿಂದ ಅ.2 ರವರೆಗೆ ನಡೆಯಲಿದ್ದು, ದೇಶದ ವಿವಿಧ ಗಣ್ಯರು ಸ್ವತ್ಛತಾ ಕಾರ್ಯ ಕೈಗೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಸುಮಾರು 2 ಸಾವಿರ ಗಣ್ಯರಿಗೆ ಮೋದಿ ಪತ್ರ ಬರೆದಿದ್ದಾರೆ.