ಬೆಂಗಳೂರು: “ಹಿಂಸೆಗೆ ಪ್ರತಿ ಹಿಂಸೆ ಸಲ್ಲದು.ಸೇಡಿನ ಮನೋಭಾವ ಬೆಳೆಸಿಕೊಳ್ಳದೆ, ಪ್ರಜಾತಂತ್ರ ವ್ಯವಸ್ಥೆಯ ಮರ್ಯಾದೆ ಕಾಪಾಡಬೇಕು. ಅದಕ್ಕೆ ಯಾವುದೇ ರೀತಿ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು’.-ಇದು ಸೋಮವಾರ ಬಿಜೆಪಿ ಯುವ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಅವರು ಈ ಕಿವಿಮಾತು ಹೇಳಿದರು.
ಹಿಂದೂ ಯುವ ಕಾರ್ಯಕರ್ತರ ಹತ್ಯೆಗಳಾಗುತ್ತಿರುವ ಬಗ್ಗೆ ಬೆಂಗಳೂರಿನ ತೇಜಸ್ವಿ ಸೂರ್ಯ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಯಾವುದೇ ಪಕ್ಷದ ಕಾರ್ಯಕರ್ತ ಹಿಂಸೆಗೆ ಬಲಿಯಾದರೂ ಅದು ಖಂಡನೀಯ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಿಂಸೆಗೆ ಸ್ಥಾನವಿಲ್ಲ. ದೇಶದ ಭವಿಷ್ಯದ ದೃಷ್ಟಿಯಿಂದ ಹಿಂಸೆಯನ್ನು ವಿರೋಧಿಸುವ ಮನೋಭಾವ ಪ್ರತಿಯೊಬ್ಬ ಕಾರ್ಯಕರ್ತರೂ ಬೆಳೆಸಿಕೊಳ್ಳಬೇಕು. ಈ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪರ-ವಿರೋಧ, ಚರ್ಚೆ, ಸಂವಾದಗಳಿಗೆ ಮುಕ್ತ ಅವಕಾಶವಿದೆ. ಆದರೆ, ಪ್ರತಿವಾದಿಗಳು ತಮ್ಮ ಮೇಲೆಯೇ ವಿಶ್ವಾಸ ಕಳೆದುಕೊಂಡಾಗ ಹಾಗೂ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಇದ್ದಾಗ, ಈ ರೀತಿಯ ಹಿಂಸಾ ಮಾರ್ಗ ತುಳಿಯುತ್ತಾರೆಂದು ತೀಕ್ಷ್ಣವಾಗಿ ಹೇಳಿದ ಅವರು, ಇದೇ ತ್ರಿಪುರಾ, ಕೇರಳ ಮತ್ತು ಕರ್ನಾಟಕದಲ್ಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ 4 ವರ್ಷಗಳಲ್ಲೇ ಸೃಷ್ಟಿ ಆಯ್ತಾ?: ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಕೇಂದ್ರ ಸರ್ಕಾರ ಸೋತಿದೆ ಎಂದು ಪದೇಪದೆ ದೂರುವ ಕಾಂಗ್ರೆಸ್‌ಗೆ ನಮ್ಮ ಪ್ರತಿಕ್ರಿಯೆ ಏನಾಗಿರಬೇಕು ಎಂದು ಕೊಪ್ಪಳದ ಶರಣು ಅವರು ಕೇಳಿದ ಪ್ರಶ್ನೆಗೆ, “ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಳೆದ ನಾಲ್ಕು ವರ್ಷಗಳಲ್ಲೇ ಸೃಷ್ಟಿ ಆಯಿತೇ? ಇಲ್ಲ, ಕಳೆದ 40 ವರ್ಷಗಳಿಂದ ಸೃಷ್ಟಿಸಿದ ನಿರುದ್ಯೋಗ ಸಮಸ್ಯೆಗೆ ಈಗ ಪರಿಹಾರ ಸಿಗುತ್ತಿದೆ’ ಎಂದರು.
ಮುದ್ರಾ ಯೋಜನೆ, ವಿದೇಶಿ ನೇರ ಬಂಡವಾಳ ಹೂಡಿಕೆ, ಮೂಲಸೌಕರ್ಯಗಳ ಅಭಿವೃದ್ಧಿ ಸೇರಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಕಾಂಗ್ರೆಸ್ ಬಳುವಳಿ: ಅದೇನೇ ಇರಲಿ, ಕಾಂಗ್ರೆಸ್ ಕಳೆದ 40 ವರ್ಷ ಸೃಷ್ಟಿಸಿದ ಸಮಸ್ಯೆಯು ಕೇವಲ ನಾಲ್ಕು ವರ್ಷಗಳಲ್ಲಿ ಬಗೆಹರಿಯುವಂತಹದ್ದಲ್ಲ. ನಿರುದ್ಯೋಗ ಸಮಸ್ಯೆಯೂ ಕಾಂಗ್ರೆಸ್‌ನ ಬಳುವಳಿಯಾಗಿದೆ. ಇದರ ನಿವಾರಣೆಗೆ ಸರ್ಕಾರ ಬದ್ಧ ಎಂದರು.