ಸುರತ್ಕಲ್: ಸಮಾಜದ ಬಡವರ ಮತ್ತು ಉಪೇಕ್ಷಿತರ ಸೇವೆ, ಆರೋಗ್ಯ ಮತ್ತು ಸಾಂಕ್ರಾಮಿಕ ವಿಪತ್ತು ನಿರ್ವಹಣೆ, ವ್ಯಾಕ್ಸಿನೇಷನ್ ದಾಖಲೆಯ ಸೇವೆ, ರೈತರ ಕಲ್ಯಾಣ, ಯುವ ಸಶಕ್ತೀಕರಣ ಆರ್ಥಿಕ ಸುಧಾರಣೆಗಳು, ತಂತ್ರಜ್ಞಾನ ಆಧಾರಿತ ಭಾರತ, ಶಿಕ್ಷಣ ನೀತಿ, ಐತಿಹಾಸಿಕ ಹೆಗ್ಗುರುತಿನ ನಿರ್ಧಾರಗಳಾದ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ, ಕಾಶಿ ವಿಶ್ವನಾಥ ಕ್ಷೇತ್ರ ಮತ್ತು ಕೇದಾರನಾಥ ಕ್ಷೇತ್ರದ ಜೀರ್ಣೋದ್ಧಾರ, ತ್ರಿವಳಿ ತಲಾಖ್ ಅಂತ್ಯ ಮತ್ತಿತರ ಹತ್ತು ಹಲವು ಯೋಜನೆ ಗಳು ಪ್ರಧಾನಿ ನರೇಂದ್ರ ಮೋದಿ ಅವರ 8 ವರ್ಷದ ಆಡಳಿತದಲ್ಲಿ ಐತಿಹಾಸಿಕ ಸಾಧನೆಗಳು ಎಂದು ಶಾಸಕ ಡಾ| ಭರತ್ ಶೆಟ್ಟಿ ವೈ. ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಗೌರವಾರ್ಥ ಪಂಚತೀರ್ಥಗಳಾಗಿ 5 ಸ್ಥಳಗಳ ಅಭಿ ವೃದ್ಧಿ, ಯೋಗ ದಿನಾಚರಣೆ, ಸಂವಿಧಾನ ದಿನಾಚರಣೆ ಮತ್ತಿತರ ಹಲವು ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ ಎಂದರು.
ತನ್ನ ಕ್ಷೇತ್ರದಲ್ಲಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಸರಕಾರಿ ಸೌಲಭ್ಯಗಳಾದ ಆಧಾರ್ ಕಾರ್ಡ್ ಸೇವೆ ಪಿಂಚಣಿ, ಇ ಶ್ರಮ, ಆಯುಷ್ಮಾನ್, ರೇಷನ್ ಕಾರ್ಡ್ ನೀಡುವ ಕಾರ್ಯ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆ, ರಾಜ್ಯಾದ್ಯಂತ 15 ದಿನಗಳ ಕಾಲ ಸಮಾಜಮುಖೀ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು ಎಂದರು.
ಟೋಲ್‌ಗೇಟ್: ಅಂದು
ಮೌನ; ಇಂದು ಹೋರಾಟ!
ಟೋಲ್‌ಗೇಟ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಈ ಹಿಂದೆ ಟೋಲ್ ಗೇಟ್ ನಿರ್ಮಾಣವಾದಾಗ ಹೋರಾಟವನ್ನು ಮಾಡದೆ ಆಮಿಷಕ್ಕೆ ಒಳಗಾಗಿ ದುಡ್ಡು ಪಡೆದುಕೊಂಡು ಮೌನವಾಗಿದವರು ಇದೀಗ ಮತ್ತೆ ನಾಟಕಕ್ಕೆ ಇಳಿದಿದ್ದಾರೆ. ಇಂತಹ ವಿಚಾರಗಳಿಗೆ ನಾನು ಹೆಚ್ಚಾಗಿ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಕೋರ್ಟಿಗೆ ಹೋದವರು ವಿವಿಧ ಕಾರಣ ಗಳಿಗಾಗಿ ಕೇಸನ್ನು ವಾಪಸ್ ಪಡೆದುಕೊಂಡು ಮೌನವಾಗಿದ್ದರು. ಈ ಎಲ್ಲ ಬೆಳವಣಿಗೆಗಳು ಆದಾಗ ಯಾರು ಕೂಡ ಮಾತನಾಡಿರಲಿಲ್ಲ ಎಂದು ಹೋರಾಟ ಗಾರರ ವಿರುದ್ಧ ಹರಿಹಾಯ್ದ ಶಾಸಕರು, ಟೋಲ್ ಗೇಟ್ ರದ್ದಾಗಬೇಕು ಎಂಬ ನಿಲು ವಿಗೆ ಸಹಮತವಿದೆ. ಮಾತ್ರವಲ್ಲ ಈ ಕುರಿತಾಗಿ ಗಡ್ಕರಿ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲು ಅವರ ಮೂಲಕ ಪತ್ರ ಬರೆದಿದ್ದೇನೆ ಎಂದರು.
ಸುರತ್ಕಲ್‌ನಲ್ಲಿ ಬೃಹತ್ ಮಾರುಕಟ್ಟೆಯ ನಿರ್ಮಾಣಕ್ಕಿದ್ದ ಎಲ್ಲ ತಾಂತ್ರಿಕ ಅಡಚಣೆ ಬಗೆ ಹರಿದಿದ್ದು ಶೀಘ್ರ ಹೊಸ ಟೆಂಡರ್ ಪ್ರಕ್ರಿಯೆ ಸಿದ್ಧತೆಯಲ್ಲಿದೆ ಎಂದರು.
ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ, ಸಂದೀಪ್ ಪಚ್ಚನಾಡಿ, ಮಹೇಶ್ ಮೂರ್ತಿ ಸುರತ್ಕಲ್, ಭರತ್ ರಾಜ್ ಕೃಷ್ಣಾಪುರ, ಮನಪಾ ಸದಸ್ಯರಾದ ಶ್ವೇತ ಪೂಜಾರಿ, ಕಿರಣ್ ಕುಮಾರ್ ಕೋಡಿಕಲ್, ನಯನ ಆರ್. ಕೋಟ್ಯಾನ್, ಬಿಜೆಪಿ ಮುಖಂಡರಾದ ರಾಜೇಶ್ ಮುಕ್ಕ, ರಾಘವೇಂದ್ರ ಶೆಣೈ, ಪುಷ್ಪರಾಜ್ ಪತ್ರಿಕಾ ಗೋಷ್ಠಿಯಲ್ಲಿದ್ದರು.