ಬೆಂಗಳೂರು/ ಹೊಸದಿಲ್ಲಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕ್ರತಿ ಇಲಾಖೆ ಆಯೋಜಿಸಿರುವ “ಅಮೃತ ಭಾರತಿಗೆ ಕನ್ನಡದಾರತಿ” ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿದ್ದಾರೆ.
91 ನೇ ಆವೃತ್ತಿಯ ‘ಮನ್ ಕಿ ಬಾತ್’ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಅಮೃತ ಮಹೋತ್ಸವಕ್ಕೆ ಸಂಬಂಧಪಟ್ಟಂತೆ ಉತ್ತಮ ಕಾರ್ಯಕ್ರಮ ನಡೆಯುತ್ತಿದೆ ಎಂದು ಶ್ಲಾಘಿಸಿದರು.
ಸಚಿವ ಸುನೀಲ್ ಕುಮಾರ್ ಕಲ್ಪನೆಯಲ್ಲಿ ಮೂಡಿ ಬಂದ ‘ಅಮೃತ ಭಾರತಿಗೆ ಕನ್ನಡದ ಆರತಿ” ಕಾರ್ಯಕ್ರಮವು ಕಳೆದ ಮೂರು ತಿಂಗಳಿಂದ ರಾಜ್ಯದಲ್ಲಿ ಸಾಂಸ್ಕ್ರತಿಕ ಹಾಗೂ ಸ್ವಾತಂತ್ರ್ಯ ಹೋರಾಟದ ಅಲೆ ಎಬ್ಬಿಸುತ್ತಿದೆ.
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ: ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ಅದ್ಭುತ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.
“ಆಜಾದಿ ಕಾ ಅಮೃತ್ ಮಹೋತ್ಸವ” ಒಂದು ಸಾಮೂಹಿಕ ಆಂದೋಲನವಾಗಲು ನನಗೆ ಸಂತೋಷವಾಗಿದೆ. ಆಗಸ್ಟ್ 13 ರಿಂದ 15 ರವರೆಗೆ ತಮ್ಮ ಮನೆಗಳ ಮೇಲೆ ಧ್ವಜಾರೋಹಣ ಮಾಡುವ ಮೂಲಕ ‘ಹರ್ ಘರ್ ತಿರಂಗ’ ಅಭಿಯಾನದಲ್ಲಿ ಭಾಗವಹಿಸಿ ಎಂದು ಅವರು ನಾಗರಿಕರಿಗೆ ಮನವಿ ಮಾಡಿದರು. ಆಗಸ್ಟ್ 2 ರಿಂದ 15 ರವರೆಗೆ ತಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಚಿತ್ರಗಳನ್ನು ಭಾರತೀಯ ಧ್ವಜಕ್ಕೆ ಬದಲಾಯಿಸುವಂತೆ ಮೋದಿ ಸಲಹೆ ನೀಡಿದರು.