ಹೊಸದಿಲ್ಲಿ: ”ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಅವರಿಗೆ ನನ್ನ ಶುಭಾಶಯಗಳು” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
”ಕರ್ನಾಟಕ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಬಿಜೆಪಿ ಕಾರ್ಯಕರ್ತರ ಶ್ರಮವನ್ನು ನಾನು ಪ್ರಶಂಸಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹುರುಪಿನಿಂದ ಕರ್ನಾಟಕಕ್ಕೆ ಸೇವೆ ಸಲ್ಲಿಸುತ್ತೇವೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
”ಬಿಜೆಪಿಗೆ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡಿದ ಕರ್ನಾಟಕದ ಜನತೆಗೆ ಕೃತಜ್ಞತೆ ಸಲ್ಲಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪಕ್ಷವು ರಾಜ್ಯದ ಕಲ್ಯಾಣಕ್ಕಾಗಿ ಜನರ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ರಾಷ್ಟಾಧ್ಯಕ್ಷ ಜೆಪಿ ನಡ್ಡಾ ಅವರು ಟ್ವೀಟ್ ಮಾಡಿ, ”ಬಿಜೆಪಿ ಕರ್ನಾಟಕದ ಜನತೆಯ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತದೆ. ಶ್ರದ್ಧೆಯುಳ್ಳ ಬಿಜೆಪಿ ಕಾರ್ಯಕರ್ತರ ಪ್ರಯತ್ನಗಳು ಮತ್ತು ನಮ್ಮ ದೃಷ್ಟಿಯಲ್ಲಿ ನಂಬಿಕೆಯನ್ನು ತೋರಿಸಿದ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಜನರ ಒಳಿತಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಮತ್ತು ರಚನಾತ್ಮಕ ವಿರೋಧ ಪಕ್ಷದ ದ ಪಾತ್ರವನ್ನು ಸಕ್ರಿಯವಾಗಿ ನಿರ್ವಹಿಸುವ ಮೂಲಕ ಧ್ವನಿ ಎತ್ತುತ್ತದೆ” ಎಂದಿದ್ದಾರೆ.
2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಚುನಾವಣಾ ಪುನರುಜ್ಜೀವನವನ್ನು ಬಯಸುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ಮತದಾರರು ನಿರ್ಣಾಯಕವಾಗಿ ಬೆಂಬಲಿಸಿದ ಕಾರಣ, ಕಾಂಗ್ರೆಸ್ 10 ವರ್ಷಗಳ ನಂತರ ಕರ್ನಾಟಕದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದೆ. ಬಿಜೆಪಿಯನ್ನು ಏಕೈಕ ದಕ್ಷಿಣದ ರಾಜ್ಯದಿಂದ ಅಧಿಕಾರದಿಂದ ಕೆಳಗಿಳಿಸಿದೆ.