Advertisement

ಪ್ರಧಾನ ಮಂತ್ರಿ ಆವಾಸ್‌ ಯೋಜನೆ; ಕಾಮಗಾರಿ ಆರಂಭಿಸಲು ಸೆ.30ರ ಗಡುವು

10:22 PM Sep 17, 2020 | mahesh |

ಬೆಂಗಳೂರು: ಪ್ರಧಾನ ಮಂತ್ರಿ ಯೋಜನೆ ಅಡಿಯಲ್ಲಿ ಫ‌ಲಾನುಭವಿಗಳು ಮನೆ ಕಟ್ಟಿಕೊಳ್ಳ ದಿದ್ದರೆ ವಾಪಸ್‌ ಪಡೆಯಲು ಸರಕಾರ ನಿರ್ಧರಿಸಿದೆ. ಈ ಕುರಿತು ಎಲ್ಲ ಪಂಚಾಯತ್‌ಗಳಿಗೂ ಮಾಹಿತಿ ನೀಡಿದ್ದು, ಫ‌ಲಾನುಭವಿಗಳು ಮನೆ ನಿರ್ಮಿಸದಿದ್ದರೆ, ಅವರಿಂದ ಲಿಖೀತ ಹೇಳಿಕೆ ಪಡೆದು ಮನೆಗಳನ್ನು ವಾಪಸ್‌ ಪಡೆಯುವಂತೆ ಸೂಚಿಸಲಾಗಿದೆ.

Advertisement

ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್‌ ಯೋಜನೆ ಅಡಿಯಲ್ಲಿ 2016-17ರಿಂದ 2019-20ರ ವರೆಗೆ 1.86 ಲಕ್ಷ ಅರ್ಹ ಫ‌ಲಾನುಭವಿ ಗಳನ್ನು ಆರಿಸಲಾಗಿದ್ದು, ಮೂರು ವರ್ಷಗಳಲ್ಲಿ 92 ಸಾವಿರ ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಬಾಕಿ ಉಳಿದ ಮನೆಗಳ ಕಾಮಗಾರಿ ಆರಂಭಿಸಲು ಸೆಪ್ಟಂಬರ್‌ 30ರ ಗಡುವು ವಿಧಿಸಲಾಗಿದೆ. ಅದು ಸಾಧ್ಯವಾಗದಿದ್ದರೆ ಫ‌ಲಾನುಭವಿ ಗಳಿಂದ ಲಿಖೀತ ಹೇಳಿಕೆ ಪಡೆದು ಮನೆಗಳನ್ನು ವಾಪಸ್‌ ಪಡೆಯುವಂತೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಗಳಿಗೆ ಸೂಚಿಸಲಾಗಿದೆ.

ಆಗಿರುವುದೇನು?
ಕೇಂದ್ರ ಸರಕಾರ 2011ರ ಜನಗಣತಿ ಆಧಾರದಲ್ಲಿ ರಾಜ್ಯದಲ್ಲಿ 6,33,990 ವಸತಿ ರಹಿತರ ಪಟ್ಟಿಯನ್ನು ರಾಜ್ಯ ಸರಕಾರಕ್ಕೆ ನೀಡಿದೆ. ಅದರಲ್ಲಿ ರಾಜ್ಯ ಸರಕಾರವು 1,86,445 ಮಂದಿಯನ್ನು ಅರ್ಹರು ಎಂದು ಪರಿಗಣಿಸಿದೆ. ಪ್ರಧಾನ ಮಂತ್ರಿ ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ 2016-17ರಲ್ಲಿ 92,394 ಮನೆಗಳು ಬಿಡುಗಡೆ ಯಾಗಿದ್ದು, ಈ ಪೈಕಿ 61,894 ಮನೆಗಳು ಪೂರ್ಣವಾಗಿವೆ. 17,375 ಮನೆಗಳು ನಿರ್ಮಾಣ ಹಂತದಲ್ಲಿದ್ದು, 12,765 ಮನೆಗಳ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

2017-18ರಲ್ಲಿ ರಾಜ್ಯಕ್ಕೆ 54,629 ಮನೆಗಳು ಮಂಜೂರಾಗಿದ್ದು, 30,306 ಮನೆಗಳ ಕಾರ್ಯ ಪೂರ್ಣ ಗೊಂಡಿವೆ. ಸುಮಾರು 15,378 ಮನೆ ಗಳು ನಿರ್ಮಾಣ ಹಂತದಲ್ಲಿದ್ದು, 8,945 ಮನೆಗಳ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

2019-20ರಲ್ಲಿ 39,422 ಮನೆಗಳು ಮಂಜೂರಾಗಿದ್ದು, ಕೇವಲ 296 ಮನೆಗಳು ಪೂರ್ತಿಯಾಗಿವೆ. 11,309 ಮನೆಗಳು ನಿರ್ಮಾಣ ಹಂತದಲ್ಲಿದ್ದು, 27,817 ಮನೆಗಳ ಕಾಮಗಾರಿ ಆರಂಭವಾಗಿಲ್ಲ. ಒಟ್ಟು ಮೂರು ವರ್ಷಗಳಲ್ಲಿ 49,527 ಫ‌ಲಾನುಭವಿಗಳು ಮನೆ ನಿರ್ಮಾಣ ಕಾರ್ಯ ಆರಂಭಿಸಿಲ್ಲ.

Advertisement

ಆರ್ಥಿಕ ಸಮಸ್ಯೆ
ಸರಕಾರ ಮನೆ ಮಂಜೂರು ಮಾಡಿದ ಕೂಡಲೇ ಹಣ ಬಿಡುಗಡೆ ಮಾಡದಿರುವುದರಿಂದ ಫ‌ಲಾನುಭವಿ ಗಳು ಸಾಲ ಮಾಡಿ ಮನೆ ನಿರ್ಮಿಸಲು ಹಿಂದೇಟು ಹಾಕುತ್ತಿದ್ದಾರೆ. ಮನೆ ಮಂಜೂರಾದ ಕೂಡಲೇ ಮೊದಲ ಕಂತಿನ ಹಣ ನೀಡಿದರೆ ಕಾಮಗಾರಿ ಆರಂಭಿಸಬಹುದು ಎನ್ನುತ್ತಾರೆ ಫ‌ಲಾನುಭವಿಗಳು.

ತಾಂತ್ರಿಕ ಕಾರಣ
ಯೋಜನೆಯಡಿ ಕೆಲವು ಮನೆಗಳ ನಿರ್ಮಾಣ ಹಂತದಲ್ಲಿದ್ದರೂ ಫ‌ಲಾನು ಭವಿಗಳ ಆಧಾರ್‌ ಕಾರ್ಡ್‌ ಜೋಡಣೆ ಹಾಗೂ ಜಿಪಿಎಸ್‌ ಮಾಡಿಸದೇ ಇರುವುದರಿಂದಲೂ ಮನೆ ನಿರ್ಮಾಣದ ಪ್ರಗತಿಯು ನಿಗಮಕ್ಕೆ ಅಪ್‌ಲೋಡ್‌ ಆಗುತ್ತಿಲ್ಲ. ಅಲ್ಲದೆ, ಫ‌ಲಾನುಭವಿಗಳು ಒಂದು ಹಂತದ ಮನೆ ನಿರ್ಮಿಸಿ ಆರು ತಿಂಗಳು ಕಾದರೂ, ತಾಂತ್ರಿಕ ಕಾರಣದಿಂದ ಹಣ ಬಿಡುಗಡೆ ಯಾಗದಿರುವುದರಿಂದ ನಿರ್ಮಾಣ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next