ಚಿಕ್ಕಮಗಳೂರು: ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಭವನ ಸರಿಯಾದ ನಿರ್ವಹಣೆ ಇಲ್ಲದೆ ಪಾಳು ಬಿದ್ದಂತಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕಿದೆ.
ನಗರದ ಹೃದಯ ಭಾಗದಲ್ಲಿ 1975, ನ. 7ರಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆಯವರು ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. 1986ರ ಫೆಬ್ರವರಿ ತಿಂಗಳಲ್ಲಿ ಜೆಎಂಜೆ ರಾಜನ್ ಅಧ್ಯಕ್ಷತೆಯಲ್ಲಿ ಪ್ರಾರಂಭೋತ್ಸವ ಮಾಡಲಾಗಿತ್ತು. ಭವನಕ್ಕೆ ಹೊಂದಿಕೊಂಡಂತೆ ಇತ್ತೀಚೆಗೆ ಹೆಚ್ಚುವರಿ ಕಟ್ಟಡ ನಿರ್ಮಾಣಗೊಂಡಿದ್ದು, ಕಟ್ಟಡ ಮೇಲಾºಗದಲ್ಲಿ ಶೌಚಾಲಯ, ಸ್ನಾನಗೃಹ ಮತ್ತು 8 ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು ಕಾಮಗಾರಿ ಪೂರ್ಣಗೊಂಡಿಲ್ಲ. ಮೂಲಕಟ್ಟಡ ಮಳೆಗಾಲದಲ್ಲಿ ಸೋರುತ್ತಿದ್ದು ವಿದ್ಯುತ್ ಸಂಪರ್ಕ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ಭವನದ ಬಳಿ ಕಸದ ರಾಶಿಯೇ ಇದ್ದು, ಭವನದ ಸುತ್ತಮುತ್ತಲ ಗಿಡಗಂಟೆಗಳು ಆವರಿಸಿದೆ. ಅನೇಕ ವರ್ಷಗಳಿಂದ ಕಟ್ಟಡಕ್ಕೆ ಸುಣ್ಣ-ಬಣ್ಣ ಬಳಿಯದೆ ಭವನ ಪಾಳು ಬಿದ್ದಂತಾಗಿದೆ.
ಭವನದ ಸ್ಥಿತಿಯನ್ನು ಗಮನಿಸಿ ಆಜಾದ್ ಪಾರ್ಕ್ ಶಾಲಾ ಶಿಕ್ಷಕರು ವರ್ಷಕ್ಕೆರಡು ಬಾರಿ ಸ್ವತ್ಛಗೊಳಿಸುತ್ತಿದ್ದು, ಇದೀಗ ಆ ಕಾರ್ಯ ನಡೆಯದಿರುವುದರಿಂದ ಆಳೆತ್ತರಕ್ಕೆ ಗಿಡಗಂಟಿಗಳು ಬೆಳೆದುಕೊಂಡಿವೆ. ಇತರೆ ತಾಲೂಕು ಕೇಂದ್ರಗಳಲ್ಲಿ ನಿರ್ಮಾಣಗೊಂಡಿರುವ ಶಿಕ್ಷಕರ ಭವನಗಳು ಆಯಾ ತಾಲೂಕು ಶಿಕ್ಷಕರ ಸಂಘದ ವ್ಯಾಪ್ತಿಗೆ ಒಳಪಟ್ಟಿದ್ದು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಿರುವ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಭವನದಲ್ಲಿ ಆಗೊಮ್ಮೆ ಈಗೊಮ್ಮೆ ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಭವನವನ್ನು ತಾಲೂಕು ಶಿಕ್ಷಕರ ಸಂಘ, ಜಿಲ್ಲಾ ಶಿಕ್ಷಕರ ಸಂಘದ ವ್ಯಾಪ್ತಿಗೆ ಒಳಪಟ್ಟಿಲ್ಲವೆಂದು ಹೇಳಲಾಗುತ್ತಿದೆ. ಇದರಿಂದ ಸರಿಯಾದ ನಿರ್ವಹಣೆ ಸಾಧ್ಯವಾಗದೆ ಪಾಳುಬಿದ್ದಿದೆ.
ಭವನ ಸಮಿತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಅಧ್ಯಕ್ಷರಾಗಿದ್ದು, ತಾಲೂಕು, ಜಿಲ್ಲಾ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರಾಗಿದ್ದಾರೆ. ಜಿಲ್ಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಭವನದ ಕಾರ್ಯದರ್ಶಿಯಾಗಿದ್ದಾರೆ. ಎಐಟಿ ಕಾಲೇಜಿನವರು ಮತ್ತು ಕ್ಷೇತ್ರ ಶಿಕ್ಷಣಾಧಿ ಕಾರಿಗಳು ಪದಾಧಿಕಾರಿಗಳಾಗಿರುತ್ತಾರೆ. ಸಮಿತಿ ಇದ್ದರೂ ಕಟ್ಟಡ ಕಾಮಗಾರಿ ಅಪೂರ್ಣಗೊಂಡಿದ್ದು, ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ. ಇನ್ನಾದರೂ ಭವನ ಉತ್ತಮ ನಿರ್ವಹಣೆಯತ್ತ ಸಮಿತಿಯವರು ಮುಖ ಮಾಡಬೇಕಿದೆ.
ಸಂಘದ ಚುನಾವಣೆ ಬಳಿಕ ಪದಾಧಿಕಾರಿಗಳು ಸಭೆ ನಡೆಸಿದ್ದು, ಹೆಚ್ಚುವರಿ ಕಟ್ಟಡ ನಿರ್ಮಿಸಿದ್ದ ಇಂಜಿನಿಯರ್ ಸಭೆಗೆ ಭಾಗವಹಿಸಿರಲಿಲ್ಲ. ಕಟ್ಟಡ ಕಾಮಗಾರಿ ಸಂಬಂಧ ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚಿಸಲಾಗುವುದು. ಹೆಚ್ಚುವರಿ ಕಟ್ಟಡ ಸಂಪೂರ್ಣವಾಗಿ ಪೂರ್ಣಗೊಳ್ಳಲು ಸುಮಾರು 13-14ಲಕ್ಷ ರೂ. ಬೇಕಾಗಿದ್ದು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಂದ ಅನುದಾನ ಪಡೆದುಕೊಳ್ಳಬೇಕಾಗಿದೆ. ಶಿಕ್ಷಕರ ಭವನದ ಬಾಕಿ ಇರುವ ಕಾಮಗಾರಿ ಕೈಗೆತ್ತಿ ಕೊಳ್ಳಲು ಸಮಗ್ರ ಕ್ರಿಯಾಯೋಜನೆ ತಯಾರಿಸಲಾಗಿದೆ. –
ಬಿ.ಎಸ್. ಪರಮೇಶ್ವರಪ್ಪ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ