Advertisement

ಗಡಿ ಭಾಗದಲ್ಲಿ ಪ್ರಾಥಮಿಕ ಶಾಲೆ ಆರಂಭ-ಆಕ್ರೋಶ

01:20 PM Sep 25, 2021 | Team Udayavani |

ಔರಾದ: ಸರ್ಕಾರ ರಾಜ್ಯದಲ್ಲಿ ಕೊರೊನಾ ಕಂಟ್ರೋಲ್‌ಗೆ ತಂದು ನಾಡಿನ ಜನರು ಶಾಂತಿ, ನೆಮ್ಮದಿಯ ಜೀವನ ಸಾಗಿಸಲು ಶ್ರಮಿಸುತ್ತಿದ್ದರೆ ಔರಾದ ಹಾಗೂ ಕಮಲನಗರ ತಾಲೂಕು ವ್ಯಾಪ್ತಿಯ ತಾಲೂಕಿನ ಕೆಲ ಶಿಕ್ಷಣ ಸಂಸ್ಥೆಗಳು ಸರಕಾರದ ನಿಯಮ ಗಾಳಿಗೆ ತೂರಿ 1ರಿಂದ 5ನೇ ತರಗತಿ ಆರಂಭಿಸಿ ಮಕ್ಕಳ ಜೀವನದೊಂದಿಗೆ ಚೆಲ್ಲಾಟ ಆಡುತ್ತಿವೆ. ನಿತ್ಯ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಶಾಲಾ ವಾಹನ ಮೂಲಕ ತಂದು ಭೋಧನೆ ಮಾಡುವಂತಹ ಕೆಲಸ ಮಾಡುತ್ತಿವೆ.

Advertisement

ಮಕ್ಕಳಿಗೆ ನಿಗೂಢ ಜ್ವರ ಉಲ್ಬಣವಾಗಿ ಪಾಲಕರು ಔರಾದ ಪಟ್ಟಣದ ಆಸ್ಪತ್ರೆಯಲ್ಲಿ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನೆರೆಯ ತೆಲಂಗಾಣದ ಹೈದರಾಬಾದನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಕ್ಕಳ ಜೀವನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಖಾಸಗಿ ಶಾಲೆ ಆಡಳಿತ ಮಂಡಳಿ ಸದಸ್ಯರು ಶಾಲೆ ಆರಂಭಿಸಿದ್ದಾರೆ.ಈ ಕುರಿತು ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲವೆಂದು ಮಾಳೆಗಾಂವ, ಬೆಳಕೂಣಿ ಮಮದಾಪೂರ ಗ್ರಾಮಸ್ಥರು ಆರೋಪಿಸಿದ್ದಾರೆ.ಸರ್ಕಾರ ಹಾಗೂ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ಪ್ರೌಢಶಾಲೆಗಳನ್ನು ಆರಂಭಿಸಲು ಸರ್ಕಾರ ಆದೇಶ ಮಾಡಿದೆ. ಆದರೆ ಕಮಲನಗರ ಹಾಗೂ ಔರಾದ ತಾಲೂಕಿನಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳು ನಡೆಯುತ್ತಿರುವ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ನಮ್ಮ ಇಲಾಖೆ ಸಿಬ್ಬಂದಿ ಕಳುಹಿಸಿ ಶಾಲೆ ಮುಚ್ಚಿಸುವಂತೆ ತಿಳಿ ಹೇಳುತ್ತೇನೆ.
ಎಸ್‌.ಎಚ್‌.ನಗನೂರ,
ಬಿಇಒ, ಔರಾದ್

ಜಿಲ್ಲಾ ಧಿಕಾರಿಗಳು ಹಾಗೂ ನಾವು ಹಗಲಿರುಳು ಶ್ರಮಿಸಿ ಕೋವಿಡ್‌ ಕಂಟ್ರೋಲ್‌ಗೆ ತಂದಿದ್ದೇವೆ. ಹಣ ಸಂಪಾದನೆ ಮಾಡುವ ವ್ಯಾಮೋಹದಿಂದ ಇಂಥ ಸಂಸ್ಥೆಗಳು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿವೆ. ಇಲಾಖೆಯ ನಿಯಮ ಮೀರುತ್ತಿರುವ ಹಾಗೂ ಮಕ್ಕಳ ಜೀವನದೊಂದಿಗೆ ಆಟವಾಡುತ್ತಿರುವ ಶಾಲೆಯ ಪರವಾನಗಿ ರದ್ದುಪಡಿಸಿ ಮಕ್ಕಳ ಆರೋಗ್ಯ ಕಡೆ ಹೆಚ್ಚು ಒತ್ತು ನೀಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಕ್ಷಣವೇ ಆದೇಶ ಮಾಡುತ್ತೇನೆ.
ಪ್ರಭು ಚವ್ಹಾಣ, ಜಿಲ್ಲಾ ಉಸ್ತುವಾರಿ ಸಚಿವ

ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ಜೀವ ಸಂರಕ್ಷಣೆ ಮಾಡಲು ಮುಂದಾಗಬೇಕು. ಶಾಲೆಗೆ ಬಂದ ಒಂದು ವಿದ್ಯಾರ್ಥಿಗೂ ಸಮಸ್ಯೆ ಆಗಿದ್ದರೆ ಅಂಥ ಶಾಲೆಯ ಹಾಗೂ ಶಿಕ್ಷಣಾಧಿ ಕಾರಿಗಳ ವಿರುದ್ಧ ಹೋರಾಟ ಮಾಡಲಾಗುತ್ತದೆ.
ಅಶೋಕ ಶೆಂಬೆಳ್ಳಿ, ಎಬಿವಿಪಿ ಜಿಲ್ಲಾ ಸಂಚಾಲಕ

Advertisement

ಪಟ್ಟಣದಲ್ಲಿ ಬಸವಗುರುಕುಲ ಶಾಲೆ ಆರಂಭಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಅಪ್ಪಾಜಿಗೆ ಪರವಾನಗಿ ನೀಡಿದ್ದಾರಂತೆ. ಹೀಗಾಗಿ ನಾವು ಶಾಲೆ ಆರಂಭಿಸಿದ್ದೇವೆ.
ಇಂದುಮತಿ, ಬಸವ ಗುರುಕುಲ
ಶಾಲೆ, ಮುಖ್ಯ ಶಿಕ್ಷಕಿ.

*ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next