ಕೊಳ್ಳೇಗಾಲ: ನಗರದ ಮುಡಿಗುಂಡ ಬಡಾವಣೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗೆ ತಿಂಗಳಿಂದ ಬೀಗ ಹಾಕಿದ್ದು, ಗ್ರಾಹಕರಲ್ಲಿ ಆತಂಕ ಹೆಚ್ಚಿಸಿದೆ.
ರೈತರು ಕೃಷಿ ಚಟುವಟಿಕೆಗಳಿಗಾಗಿ ತಮ್ಮ ಬಳಿ ಇದ್ದ ಚಿನ್ನಾಭರಣಗಳನ್ನು ಈ ಸಂಘದಲ್ಲಿ ಅಡವಿಟ್ಟಿದ್ದಾರೆ. ಕೆಲವು ರೈತರು ಭದ್ರತಾ ಹೂಡಿಕೆಯನ್ನು ಮಾಡಿದ್ದಾರೆ. ಈ ಮುಂಗಾರು ಮಳೆ ಆರಂಭವಾಗಿರುವ ಕಾರಣ ವ್ಯವಸಾಯ ಕ್ಕಾಗಿ ರೈತರು ಸಾಲ ಪಡೆಯಲು ಪರದಾಡುತ್ತಿದ್ದಾರೆ. ಕಚೇರಿಗೆ ಬೀಗ ಹಾಕಿರುವುದನ್ನು ನೋಡಿ ಗ್ರಾಹಕರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಸಂಘದಲ್ಲಿ ಇಟ್ಟಿರುವ ಚಿನ್ನಕ್ಕೆ ಭದ್ರತೆ ಏನು? ನಾವು ಇಟ್ಟಿರುವ ಚಿನ್ನ ಮತ್ತು ಹಣ ನಮಗೆ ಮರಳಿ ಬರುತ್ತದೆಯೇ? ಸಂಘವು ಎಂದಿನಂತೆ ವಹಿವಾಟು ಮಾಡುವುದು ಯಾವಾಗ ಎಂದು ಗ್ರಾಹಕರು ಅಧಿಕಾರಿಗಳಿಗೆ ಪ್ರಶ್ನೆಗಳನ್ನು ಹಾಕುತ್ತಿದ್ದಾರೆ. ಬ್ಯಾಂಕ್‌ನಲ್ಲಿ ಇಟ್ಟಿರುವ ಠೇವಣಿ ಹಣ, ಚಿನ್ನವನ್ನು ವಾಪಸ್ ನೀಡಬೇಕೆಂದು ಗ್ರಾಹಕರು ಹಲವು ಬಾರಿ ಪ್ರತಿಭಟನೆ ಮಾಡಿ, ಮೇಲಧಿಕಾರಿಗಳು ತನಿಖೆ ನಡೆಸುವಂತೆ ಒತ್ತಾಯಿಸಿದ್ದರೂ ಫಲಕಾರಿಯಾಗದೆ ಇರುವುದು, ಗ್ರಾಹಕರನ್ನು ಸಂಕಷ್ಟಕ್ಕೆ ತಂದೊಡ್ಡಿದೆ.
ನಗರದ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರನ್ನು ಪ್ರಶ್ನಿಸಿದಾಗ ನಮ್ಮ ಬ್ಯಾಂಕ್‌ನಿಂದ ಮುಡಿಗುಂಡ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕೇಳಿದಷ್ಟು ಹಣ ಒದಗಿಸಲಾಗುತ್ತದೆ. ಬೀಗ ಹಾಕಿರುವ ಬಗ್ಗೆ ಆಡಳಿತ ಮಂಡಳಿ ಕ್ರಮಕೈಗೊಳ್ಳಬೇಕು.
●ಪ್ರವೀಣ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ.
ಸಹಕಾರ ಸಂಘದಿಂದ ಸಾಲ ಪಡೆದಿರುವವರಿಗೆ ನೋಟಿಸ್ ನೀಡಲು ಮನೆಗಳಿಗೆ ಹೋಗುತ್ತಿದ್ದೇನೆ. ಆದ್ದರಿಂದ ಬ್ಯಾಂಕ್‌ಗೆ ಬೀಗ ಹಾಕಿದ್ದೇವೆ.
●ರಾಮು, ಪಿಎಸಿಸಿ ಕಾರ್ಯದರ್ಶಿ.
ಒಂದು ತಿಂಗಳಿಂದ ಶಾಖೆಗೆ ಬೀಗ ಬಿದ್ದಿದೆ. ಬ್ಯಾಂಕ್‌ನಲ್ಲಿ ಕಾರ್ಯದರ್ಶಿ ರಾಮು ಮತ್ತು ಸಿಬ್ಬಂದಿ ಸಂಪರ್ಕಕ್ಕೆ ಸಿಗುತ್ತಿಲ್ಲ, ಸೋಮವಾರದಿಂದ ಬ್ಯಾಂಕ್ ಬೀಗ ತೆಗೆಯುವ ಪ್ರಯತ್ನ ಮಾಡುತ್ತೇನೆ.
● ಮರಿಸ್ವಾಮಿ, ಪಿಎಸಿಸಿ ಅಧ್ಯಕ್ಷ.
●ಡಿ.ನಟರಾಜು