Advertisement
ಸಾಹಿಲ್ ಮತ್ತು ನಿಕ್ಕಿ ಯಾದವ್ 2020ರ ಅಕ್ಟೋಬರ್‌ನಲ್ಲೇ ಉತ್ತರ ಪ್ರದೇಶದ ನೋಯ್ಡಾದ ಆರ್ಯ ಸಮಾಜ ಹಾಲ್‌ನಲ್ಲಿ ಮದುವೆಯಾಗಿದ್ದರು. ಈ ಕುರಿತು ಫೋಟೋಗಳು ಮತ್ತು ಮದುವೆ ನೋಂದಣಿ ಆಗಿರುವುದರ ಸಾಕ್ಷ್ಯಗಳು ಪೊಲೀಸರಿಗೆ ದೊರೆತಿದೆ. ಆದರೆ ಈ ಮದುವೆ ಬಗ್ಗೆ ಸಾಹಿಲ್ ಮನೆಯವರಿಗೆ ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ ಬೇರೆ ಯುವತಿಯೊಂದಿಗೆ ಆತನಿಗೆ ಮದುವೆ ನಿಶ್ಚಯಿಸಿದ್ದರು.
ನಿಕ್ಕಿ ಕೊಲೆಗೆ ಸ್ವತಃ ಸಾಹಿಲ್ ಕುಟುಂಬದವರು ಸಾಥ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಾಹಿಲ್ ತಂದೆ ವೀರೇಂದ್ರ ಸಿಂಗ್, ಸಹೋದರರಾದ ಅನೀಶ್, ನವೀನ್ ಹಾಗೂ ಸ್ನೇಹಿತರಾದ ಲೋಕೇಶ್ ಮತ್ತು ಅಮರ್ ಎಂಬುವವರನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ನಿಕ್ಕಿ ಯಾದವ್ ಹರ್ಯಾಣದ ಝಜ್ಜರ್ ಮೂಲದವರು. ಎಸ್‌ಎಸ್‌ಸಿ ಪರೀಕ್ಷೆಗೆ ಕೋಚಿಂಗ್ ಪಡೆಯಲು ಅವರು ದೆಹಲಿಗೆ ಬಂದಿದ್ದರು. ಇಲ್ಲಿ ಸಾಹಿಲ್ ಪರಿಚಯವಾಗಿ ನಂತರ ಅದು ಪ್ರೇಮಕ್ಕೆ ತಿರುಗಿತ್ತು. ಮದುವೆಯ ನಂತರ ಇಬ್ಬರೂ ನೈಋತ್ಯ ದೆಹಲಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇನ್ನೊಂದೆಡೆ, ಸಾಹಿಲ್ ಕುಟುಂಬದವರು 2023ರ ಫೆ.10ಕ್ಕೆ ಬೇರೆ ಯುವತಿಯೊಂದಿಗೆ ಆತನ ಮದುವೆ ಗೊತ್ತು ಮಾಡಿದ್ದರು. ಫೆ.9ರಂದು ಯುವತಿಯೊಂದಿಗೆ ನಿಶ್ಚಿತಾರ್ಥ ಮುಗಿಸಿದ ಸಾಹಿಲ್, ಸಂಜೆ ಮನೆಗೆ ಬಂದು ನಿಕ್ಕಿಯನ್ನು ಕಾರಿನಲ್ಲಿ ಕಾಶ್ಮೀರ ಗೇಟ್‌ಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಆಕೆಯನ್ನು ಕಾರಿನಲ್ಲೇ ಮೊಬೈಲ್ ಚಾರ್ಜರ್ ಕೇಬಲ್‌ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಬಳಿಕ ಕುಟುಂಬದ ಒಡೆತನದ ಡಾಬಾದ ಫ್ರಿಡ್ಜ್ ನಲ್ಲಿ ಮೃತದೇಹ ಅಡಗಿಸಿಟ್ಟಿದ್ದ. ಮಾರನೆಯ ದಿನ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದ. ಕೃತ್ಯಕ್ಕೆ ಆತನಿಗೆ ಕುಟುಂಬದವರ ಬೆಂಬಲ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.