ಚಿಕ್ಕಬಳ್ಳಾಪುರ: ಕುರಿ ಹಾಗೂ ಮೇಕೆಗಳ ಸೊಂಟ ನೋಡಿ ಮನಸ್ಸಿಗೆ ಬಂದಷ್ಟು ತೂಕ ಹೇಳಿ ಸಾಕಾಣಿಕೆದಾರರಿಂದ ವ್ಯಾಪಾರಸ್ಥರು ಇನ್ಮೆಲೆ ಕೈಗೆ ಬಂದ ಬೆಲೆಗೆ ಖರೀದಿ ಮಾಡುವಂತಿಲ್ಲ. ಇನ್ಮುಂದೆ ಕುರಿ ಹಾಗೂ ಮೇಕೆಗಳ ತೂಕದ ಮೇಲೆಯೇ ವೈಜ್ಞಾನಿಕವಾಗಿ ಬೆಲೆ ನಿಗದಿಯಾಗಲಿದೆ. ಹೌದು, ರಾಜ್ಯ ಸಹಕಾರಿ ಕುರಿ ಮತ್ತು ಮೇಕೆ ಸಾಕಾಣಿಕೆ ಸಂಘಗಳ ಮಹಾ ಮಂಡಳ ತಾಲೂಕಿನ ಪೆರೇಸಂದ್ರದಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ವೈಜ್ಞಾನಿಕ ಕುರಿ ಹಾಗೂ ಮೇಕೆಗಳ ಮಾರುಕಟ್ಟೆಗೆ ಸೋಮವಾರ ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್ ಚಾಲನೆ ನೀಡಿದರು.
ಜಿಲ್ಲೆಯಲ್ಲಿ ರೈತಾಪಿ ಜನ ಕೃಷಿಯಷ್ಟೇ ಉಪ ಕಸುಬುಗಳಾಗಿ ಕುರಿ ಹಾಗೂ ಮೇಕೆಗಳ ಸಾಕಾಣಿಕೆಯಲ್ಲಿ ತೊಡಗಿದ್ದು, ರೈತರಿಗೆ ಸಂತೆಗಳಲ್ಲಿ ಮಧ್ಯವರ್ತಿಗಳ ಹಾಗೂ ದಲ್ಲಾಳಿಗಳಿಂದ ಆಗುತ್ತಿರುವ ತೂಕದ ವಂಚನೆ, ಬೆಲೆ ನಿಗದಿಯಲ್ಲಿ ಮೋಸ ಆಗುತ್ತಿದೆ. ಇದನ್ನು ತಪ್ಪಿಸಿ ಬೆಳೆಗಾರರಿಗೆ ವೈಜ್ಞಾನಿಕವಾಗಿ ಸ್ಥಳದಲ್ಲಿಯೇ ತೂಕ ಮಾಡಿಸಿ ದರ ನಿಗದಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ರಾಜ್ಯದ ಸಹಕಾರಿ ಕುರಿ
ಹಾಗೂ ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಲ ಹಾಗೂ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸಹಯೋಗದೊಂದಿಗೆ ರಾಜ್ಯದ 80 ಎಪಿಎಂಸಿ ಮಾರುಕಟ್ಟೆಗಳಲ್ಲಿ ವೈಜ್ಞಾನಿಕ ಕುರಿ ಮತ್ತು ಮೇಕೆಗಳ ಮಾರುಕಟ್ಟೆಯನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಪೆರೇಸಂದ್ರದ ಸ್ಥಳೀಯ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರುಕಟ್ಟೆ ಸ್ಥಾಪಿಸುವ ಮೂಲಕ ಜಿಲ್ಲೆಯ ಕುರಿ ಹಾಗೂ ಮೇಕೆ ಸಾಕಾಣಿಕೆದಾರರಿಗೆ ಅನುಕೂಲ ಕಲ್ಪಿಸಿದೆ.
ನ್ಯಾಯಯುತ ಬೆಲೆ: ವೈಜ್ಞಾನಿಕ ಕುರಿ ಹಾಗೂ ಮೇಕೆ ಮಾರುಕಟ್ಟೆಗೆ ಚಾಲನೆ ನೀಡಿ ಮಾತನಾಡಿದ ಜಿಪಂ ಸಿಇಒ, ಕ್ರಮಬದ್ಧ ಬೆಲೆ ನಿರ್ಧರಿಸುವ ವಿಧಾನದಿಂದ ರೈತರಿಗೆ ಹೆಚ್ಚಿನ ಬೆಲೆ ದೊರೆಯುವಂತಾಗುತ್ತದೆ. ಉತ್ಪಾದಕರು ಖರೀದಿದಾರರೊಂದಿಗೆ ನೇರವಾಗಿ ವ್ಯಾಪಾರ ಮಾಡಿಕೊಳ್ಳಲು ಸಹಾಯವಾಗುತ್ತದೆ. ಇದರಿಂದಾಗಿ ನ್ಯಾಯಯುತ ಬೆಲೆ ಪಡೆಯುವಲ್ಲಿ ಸಾಕಾಣಿಕೆದಾರರು ವಂಚಿತರಾಗುವುದನ್ನು ತಪ್ಪಿಸಬಹುದಾಗಿದೆ ಎಂದರು.
ರ್‍ಯಾಂಪ್ ನಿರ್ಮಾಣ: ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಆಧುನಿಕ ವ್ಯವಸ್ಥೆಯಲ್ಲಿ ಪ್ರಾಣಿಗಳು ನಿಲ್ಲುವ ಜಾಗ, ನೀರಿನ ಸೌಲಭ್ಯ, ತೂಕ ಮಾಡುವ ವ್ಯವಸ್ಥೆ ಮತ್ತು ಪ್ರಾಣಿಗಳನ್ನು ಇಳಿಸಲು ಹಾಗೂ ವಾಹನಗಳಿಗೆ ತುಂಬಲು ರ್‍ಯಾಂಪ್‌ಗ್ಳನ್ನು ನಿರ್ಮಿಸಲಾಗಿದೆ. ಸ್ಥಳೀಯವಾಗಿ ಚಾಲ್ತಿಯಲ್ಲಿರುವ ಮಾರುಕಟ್ಟೆ ದರ ಆಧರಿಸಿ ತೂಕ ಪರಿಗಣಿಸಿ ದರ ನಿಗದಿಪಡಿಸಲಾಗುವುದು. ಆಧುನಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಎಲ್ಲಾ ವಿಭಾಗೀಯದಾರರು ಭಾಗವಹಿಸಿ ಇದರ ಪ್ರಯೋಜನ ಪಡೆಯಬೇಕೆಂದರು.
ಮಾರುಕಟ್ಟೆ ನಿರ್ವಹಣೆ ಮಹಾ ಮಂಡಳಕ್ಕೆ: ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಸಂಘಗಳ ರಾಜ್ಯಾಧ್ಯಕ್ಷ ಬಳುವನಹಳ್ಳಿ ಲೋಕೇಶ್ ಮಾತನಾಡಿ, ಕುರಿ ಹಾಗೂ ಮೇಕೆಗಳನ್ನು ವೈಜ್ಞಾನಿಕವಾಗಿ ಮಾರಾಟ ಮಾಡುವ ವ್ಯವಸ್ಥೆಗೆ ಸರ್ಕಾರ ಪ್ರೋತ್ಸಾಹ ನೀಡಿದ್ದು, ಮಾರುಕಟ್ಟೆಗಳ ನಿರ್ವಹಣೆ ಮಾಡಲು ಸರ್ಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳಕ್ಕೆ ವಹಿಸಿ ಕೊಟ್ಟಿದೆ.
ಅದರಂತೆ ಮಾರುಕಟ್ಟೆಯಲ್ಲಿ ಸ್ಥಳೀಯ ಕೃಷಿ ಮಾರುಕಟ್ಟೆ ಸಮಿತಿ ಸಹಯೋಗದೊಂದಿಗೆ ಕ್ರಮ ಬದ್ಧವಾಗಿ ನಿರ್ವಹಿಸಲು ಸ್ಥಳೀಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಸಂಘ ರಚಿಸಲಾಗಿದೆ ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಗೋವಿಂದಸ್ವಾಮಿ, ನಿರ್ದೇಶಕರಾದ ಕೃಷ್ಣಾರೆಡ್ಡಿ, ಮಿಲ್ಟನ್ ವೆಂಕಟೇಶ್, ಪಶು ವೈದ್ಯಕೀಯ ಇಲಾಖೆ ಕುರಿ ಮತ್ತು ಮೇಕೆ ಉಣ್ಣೆ ನಿಗಮದ ಉಸ್ತುವಾರಿ ಡಾ.ಜ್ಞಾನೇಶ್, ಗ್ರಾಪಂ ಅಧ್ಯಕ್ಷ ಚೆನ್ನಕೃಷ್ಣಾರೆಡ್ಡಿ, ಎಪಿಎಂಸಿ ಕಾರ್ಯದರ್ಶಿ ರಾಮದಾಸ್ ಉಪಸ್ಥಿತರಿದ್ದರು.
ಕುರಿ ಮತ್ತು ಮೇಕೆ ಮಾರಾಟ ಮಾಡಲು ಹಾಗೂ ಖರೀದಿಸಲು ಎಪಿಎಂಸಿ ಮಾರುಕಟ್ಟೆ ಪ್ರಮುಖ ಸ್ಥಳವಾಗಿರುತ್ತದೆ. ಎಪಿಎಂಸಿ ಪ್ರಾಂಗಣದಲ್ಲಿ ಮಾರುಕಟ್ಟೆಗೆ ಪೂರಕವಾದ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
-ಫೌಝೀಯಾ ತರುನ್ನುಮ್, ಜಿಪಂ ಸಿಇಒ