ವಿಧಾನಪರಿಷತ್ತು: ರಷ್ಯಾ-ಉಕ್ರೇನ್ ಯುದ್ಧದಿಂದ ಬೆಲೆ ಏರಿಕೆ ಸಮಸ್ಯೆ ಆಗಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತದಂತೆ ಬೆಲೆಗಳ ನಿಗದಿಯಾಗುತ್ತದೆ ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಎಸ್. ರವಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಖಾದ್ಯತೈಲ ಮತ್ತು ಖಾದ್ಯತೈಲ ಬೀಜಗಳ ಅಧಿಕೃತ ಬೆಲೆ ಏರಿಕೆಯನ್ನು ನಿಯಂತ್ರಿಸಲು ಚಿಲ್ಲರೆ, ಸಗಟು ವ್ಯಾಪಾರಿಗಳು ಮತ್ತು ದೊಡ್ಡ ಮಟ್ಟದ ಗ್ರಾಹಕರುಗಳಿಗೆ ದಾಸ್ತಾನು ಮಿತಿಯನ್ನು ನಿಗದಿಪಡಿಸಿ ಆದೇಶಿಸಲಾಗಿದೆ. ಸದ್ಯ ರಾಜ್ಯದಲ್ಲಿ 4 ಲಕ್ಷ ಮೆಟ್ರಿಕ್ ಟನ್ ಖಾದ್ಯತೈಲ ದಾಸ್ತಾನು ಇದೆ ಎಂದರು.
ಅಗತ್ಯವಸ್ತುಗಳನ್ನು ದಾಸ್ತಾನು ಮಾಡಿರುವ ಬಗ್ಗೆ ರಾಜ್ಯಾದ್ಯಂತರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಆಗಿಂದ್ದಾಗೆ ತಪಾಸಣೆ ಕೈಗೊಳ್ಳುತ್ತಿದ್ದಾರೆ. ಜೊತೆಗೆ ಪೆಟ್ರೋಲ್, ಡಿಸೇಲ್ ಪಂಪ್‌ಗ್ಳನ್ನು ಸಹ ತಪಾಸಣೆ ನಡೆಸಿ ಸುಗಮ ಹಾಗೂ ನಿಖರ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ:ವಿದ್ಯಾರ್ಥಿನಿಗೆ ದೈಹಿಕ ಶಿಕ್ಷಕನಿಂದ ಅಶ್ಲೀಲ ಸಂದೇಶ : ಪ್ರಶ್ನಿಸಿದ ವಿದ್ಯಾರ್ಥಿಗೆ ಬೆದರಿಕೆ
ಸೂಪರ್ ಮಾರ್ಕೆಟ್, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಅನಧಿಕೃತವಾಗಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ತಪಾಸಣೆ ನಡೆಸಲಾಗುತ್ತಿದ್ದು, ಇದುವರೆಗೆ 75 ಮೊಕದ್ದಮೆಗಳನ್ನು ಹೂಡಲಾಗಿದ್ದು, 29 ಮೊಕದ್ದಮೆಗಳಲ್ಲಿ 2.96 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.