ಕುಂದಾಪುರ/ಮಂಗಳೂರು: ಲಾಕ್‌ಡೌನ್ ವೇಳೆ ಇಳಿಕೆ ಕಂಡಿದ್ದ ತರಕಾರಿಗಳ ಬೆಲೆ ದಿನೇ ದಿನೆ ಏರುಗತಿಯಲ್ಲಿ ಸಾಗುತ್ತಿದೆ. ಅದರಲ್ಲೂ ಮಾರ್ಚ್, ಜೂನ್‌ನಲ್ಲಿ 25 ರೂ. ಇದ್ದ ಒಂದು ಕೆ.ಜಿ. ಟೊಮೆಟೋ ಬೆಲೆ ಈಗ 50 ರೂ. ವರೆಗೆ ಏರಿಕೆಯಾಗಿದೆ. ಬಟಾಟೆ, ನುಗ್ಗೆ, ಬೀನ್ಸ್, ಕ್ಯಾರೆಟ್ ಬೆಲೆಯೂ ಗಗನಕ್ಕೇರುತ್ತಿದೆ.
ವಿಪರೀತ ಮಳೆಯಿಂದಾಗಿ ಫಸಲು ಹಾನಿಗೀಡಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಚಿಕ್ಕಮಗಳೂರಿನಿಂದ ಕರಾವಳಿಗೆ ಬರುವ ಟೊಮೆಟೋ ಬೆಲೆ 50 ರೂ. ಆಸುಪಾಸಿನಲ್ಲಿ ದ್ದರೆ, ಕೋಲಾರ ಮತ್ತಿತರ ಕಡೆಗಳಿಂದ ಬರುವ ಟೊಮೆಟೋ 40 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಗಣೇಶ ಚತುರ್ಥಿಗೂ ಮುನ್ನ 1ಕೆ.ಜಿ.ಗೆ 25-30 ರೂ. ಇದ್ದ ಟೊಮೆಟೋ ಬೆಲೆ ಈಗ 50 ರೂ. ಗೆ ಏರಿಕೆಯಾಗಿದೆ.
ಇನ್ನಷ್ಟು ಏರಿಕೆ ಸಂಭವ?
ಮಳೆಯ ಹಾನಿಯ ಜತೆಗೆ ಇನ್ನೊಂದು ಕಾರಣವೆಂದರೆ ತರಕಾರಿ ಬೆಳೆಯಲು ಆರಂಭಿಸುವ ವೇಳೆಗೆ ಲಾಕ್‌ಡೌನ್ ಜಾರಿಯಾಗಿದ್ದರಿಂದ ಭವಿಷ್ಯದ ಬಗ್ಗೆ ಬೆಳೆಗಾರರಲ್ಲಿ ಅಸ್ಪಷ್ಟತೆ ಇದ್ದು ಹೆಚ್ಚಿನ ರೈತರು ಟೊಮೆಟೋ ಸಹಿತ ಹೆಚ್ಚಿನ ತರಕಾರಿಗಳನ್ನು ಬೆಳೆದಿಲ್ಲ. ನವರಾತ್ರಿ ವೇಳೆಗೆ ತರಕಾರಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಂಭವವಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು.
ನವರಾತ್ರಿ ಸಮಯದಲ್ಲಿ ತರಕಾರಿ ಬೆಲೆ ಏರಿಕೆ ಸಾಮಾನ್ಯ. ಆದರೆ ಈ ಬಾರಿ ಅದಕ್ಕೂ ಒಂದು ತಿಂಗಳಿಗೆ ಮುನ್ನವೇ ದರ ಹೆಚ್ಚಳವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಬಂದಿದ್ದರಿಂದ ಬೆಳೆಯೆಲ್ಲ ಹಾನಿಗೀಡಾಗಿದೆ. ಟೊಮೆಟೋ ಹೆಚ್ಚಾಗಿ ಬೆಳೆಯುವ ಕೋಲಾರ ಮತ್ತಿತರ ಕಡೆಗಳ ಟೊಮೆಟೋ ಮಹಾರಾಷ್ಟ್ರ, ರಾಜಸ್ಥಾನ, ಹೊಸದಿಲ್ಲಿಗೆ ರವಾನೆಯಾಗುತ್ತಿದೆ. ಅಲ್ಲಿ 1 ಕೆ.ಜಿ. ಟೊಮೆಟೋಗೆ 80ರಿಂದ 100 ರೂ. ವರೆಗೆ ಮಾರಾಟವಾಗುತ್ತಿದೆ. ಅಲ್ಲಿ ಹೆಚ್ಚಿನ ಬೇಡಿಕೆಯೂ ಇರುವುದರಿಂದ ಈ ಕಡೆಗೆ ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಕೊರೊನಾ ಲಾಕ್‌ಡೌನ್, ನೆರೆ, ಬೇರೆ ರಾಜ್ಯಗಳಿಗೆ ತರಕಾರಿ ಹೆಚ್ಚಾಗಿ ರಫ್ತಾಗುತ್ತಿರುವುದೂ ಬೆಲೆ ಏರಿಕೆಗೆ ಕಾರಣವಿರಬಹುದು.
– ಗಣೇಶ್ ಕುಂದಾಪುರ,/ ನಿತಿನ್ ಶೆಟ್ಟಿ ಮಂಗಳೂರು ತರಕಾರಿ ವ್ಯಾಪಾರಿಗಳು.