Advertisement
ಒಂದು ಸಮಯದಲ್ಲಿ ಕರಾವಳಿ ಪ್ರದೇಶದ ರೈತರು ಪ್ರಮುಖ ಉಪಬೆಳೆಯಾಗಿ ಬೆಳೆಯುತ್ತಿದ್ದ ಬೆಳೆ ಕೊಕ್ಕೋ ಅಡಿಕೆ, ಕರಿಮೆಣಸು ಬೆಲೆ ಏರಿಕೆ ಮತ್ತು ಈ ಫಸಲುಗಳನ್ನು ಹಾಳು ಮಾಡುವ ಆರೋಪದ ಮಧ್ಯೆ ನಶಿಸುವ ಹಂತಕ್ಕೆ ತಲುಪಿತ್ತು. ಆದರೆ ಇತ್ತೀಚೆಗೆ ಕೊಕ್ಕೋ ಹೊಂದಿರುವ ಬೇಡಿಕೆ ಹಾಗೂ ಅದಕ್ಕೆ ಅನುಸಾರವಾಗಿ ಕಾಯ್ದುಕೊಂಡಿರುವ ಬೆಲೆ ಸ್ಥಿರತೆಯು ಮತ್ತೆ ಕೊಕ್ಕೋವನ್ನು ಬೆಳೆಗಾರರು ಅಪ್ಪಿಕೊಳ್ಳುವಂತೆ ಮಾಡಿದೆ.
ಕೊಕ್ಕೋ ಬೆಳೆಯುವುದರಲ್ಲಿ ರಾಜ್ಯದಲ್ಲೇ ದ.ಕ. ಜಿಲ್ಲೆಯು ಮುಂಚೂಣಿಯಲ್ಲಿದ್ದು, ಜಿಲ್ಲೆಯಲ್ಲಿ ಪುತ್ತೂರು ತಾಲೂಕು ಆಗ್ರಸ್ಥಾನದಲ್ಲಿದೆ. ಸುಳ್ಯ ತಾಲೂಕು 4 ನೇ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಕೊಕ್ಕೋ ಬೆಳೆಯ ವಿಸ್ತೀರ್ಣವು ಸುಮಾರು 1 ಸಾವಿರ ಹೆಕ್ಟೇರ್ ಗಳಾಗಿದ್ದು, ಪುತ್ತೂರು ತಾಲೂಕಿನಲ್ಲಿ ಸುಮಾರು 275 ಹೆಕ್ಟೇರ್ ವಿಸ್ತೀರ್ಣದಲ್ಲಿ, ಸುಳ್ಯದಲ್ಲಿ ಸುಮಾರು 165 ಹೆಕ್ಟೇರ್ ಪ್ರದೇಶದಲ್ಲಿ ಕೊಕ್ಕೋ ಬೆಳೆಯುತ್ತಿದ್ದಾರೆ.
Related Articles
ಜಾಗತಿಕವಾಗಿ ಕೊಕ್ಕೋ ಬೆಳೆಯನ್ನು ಸುಮಾರು 50 ದೇಶಗಳಲ್ಲಿ ಬೆಳೆಯಲಾಗುತ್ತಿದ್ದು, ಸುಮಾರು 4.25 ಮಿಲಿಯ ಟನ್ ಕೊಕ್ಕೋ ಉತ್ಪಾದನೆಯಾಗುತ್ತಿದೆ. ಭಾರತದಲ್ಲಿ ವಾರ್ಷಿಕವಾಗಿ ಸುಮಾರು 18 ಸಾವಿರ ಟನ್ ಕೊಕ್ಕೋ ಬೆಳೆಯುತ್ತಿದೆ. ಈ ಬೆಳೆಯನ್ನು ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಸುಮಾರು 47 ಸಾವಿರ ಹೆಕ್ಟೇರ್ ಪ್ರದೇಶ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತಿದೆ. ಇದರ ವಿಸ್ತೀರ್ಣವು ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುತ್ತಿದೆ.
Advertisement
ಬೇಡಿಕೆಯಲ್ಲೂ ಹೆಚ್ಚಳಪ್ರಸ್ತುತ ದಿನಗಳಲ್ಲಿ ಕೊಕ್ಕೋ ಆಧಾರಿತ ಚಾಕಲೇಟುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಇದರ ಬೇಡಿಕೆಯು ಸುಮಾರು 32 ಸಾವಿರ ಟನ್‌ಗಳಷ್ಟಿದೆ. ಆಫ್ರಿಕಾದ ರಾಷ್ಟ್ರಗಳಲ್ಲಿ ಕೊಕ್ಕೋ ಬೆಳೆಯು ಕುಸಿಯುತ್ತಿರುವುದರಿಂದ ಕೊಕ್ಕೋ ಆಧಾರಿತ ಉತ್ಪನ್ನಗಳನ್ನು ಉತ್ಪಾದಿಸುವ ಬಹುರಾಷ್ಟ್ರೀಯ ಕಂಪೆನಿಗಳು ಭಾರತದತ್ತ ಮುಖಮಾಡಿರುತ್ತದೆ. ಈ ಕಾರಣದಿಂದ ಸರಾಸರಿ ಕೆ.ಜಿ.ಯೊಂದರ 50-60 ರೂ. ಸ್ಥಿರತೆಯ ಧಾರಣೆ ನಿಲ್ಲುತ್ತದೆ. ಇದು ಕೊಕ್ಕೋ ಬೆಳೆಯುವುದಕ್ಕೆ ಅವಕಾಶವನ್ನು ಹೆಚ್ಚಿಸಿದೆ. ಮಾರುಕಟ್ಟೆ ವ್ಯವಸ್ಥೆ
ದೇಶದಲ್ಲಿ ಉತ್ಪಾದನೆಯಾಗುವ ಕೊಕ್ಕೋ ಬೀಜದ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇರುವುದರಿಂದ ಆಮದಿನ ಪ್ರಮಾಣ ಅಧಿಕವಾಗುತ್ತಿದೆ. ಕೊಕ್ಕೋದ ವ್ಯವಹಾರದಲ್ಲಿ ಶೇ. 70 ರಷ್ಟು ಬಹುರಾಷ್ಟ್ರೀಯ ಕಂಪೆನಿಗಳ ಹತೋಟಿಯಲ್ಲಿರುವುದರಿಂದ ಆಮದಿನ ಧಾರಣೆ ಮತ್ತು ಕಂಪೆನಿಗಳ ನಿರ್ಧಾರದಿಂದ ಇದರ ಧಾರಣೆ ನಿರ್ಧಾರವಾಗುತ್ತದೆ. ಇದರಿಂದಾಗಿ ಕೊಕ್ಕೋ ಧಾರಣೆ ಸ್ಥಿರವಾಗಬೇಕಾದರೆ ಇದರ ಉತ್ಪಾದನೆಯು ನಮ್ಮಲ್ಲಿ ಹೆಚ್ಚಳವಾಗಬೇಕು. ಕೃಷಿಕರಿಗೆ ಚೈತನ್ಯ
ಕೊಕ್ಕೋ ಬೆಳೆಯು ವರ್ಷದಲ್ಲಿ ಎರಡು ಬಾರಿ ಫಸಲು ಕೊಡುವುದರಿಂದ ಇದು ಕೃಷಿಕರಿಗೆ ಚೈತನ್ಯ ತುಂಬುತ್ತದೆ. ಅಡಿಕೆ ಉತ್ಪಾದನೆ ಇಲ್ಲದಿರುವಂತಹ ಸಮಯದಲ್ಲಿ ಇದನ್ನು ಉಪಬೆಳೆಯಾಗಿ ಬೆಳೆದರೆ ಇದು ರೈತರಿಗೆ ಜೀವ ತುಂಬುತ್ತದೆ. ಈ ನಿಟ್ಟಿನಲ್ಲಿ ಇಂದು ಕೊಕ್ಕೋ ಬೆಳೆಯಲು ನಮ್ಮ ರೈತರಿಗೆ ಪ್ರೋತ್ಸಾಹ ಮತ್ತು ಪ್ರೇರಣೆ ದೊರಕಬೇಕಿದೆ. ಆದಾಯದ ರೂಪ
ಒಂದು ಕೊಕ್ಕೋ ಗಿಡದಿಂದ ವಾರ್ಷಿಕವಾಗಿ ಸಾಮಾನ್ಯವಾಗಿ ಎರಡು ಬೆಳೆಗಳಲ್ಲಿ ಕನಿಷ್ಠ 4-5 ಕಿಲೋ ಬೀಜದ ಉತ್ಪಾದನೆ ಲಭಿಸುತ್ತದೆ. ಇದಕ್ಕೆ ಬೆಲೆ ಸಮೀಕರಣ ಮಾಡಿದರೆ ಒಂದು ಸಸ್ಯಕ್ಕೆ ಅಂದಾಜು 250 ರೂ. ರೂಪದ ಆದಾಯ, ಜತೆಗೆ ಮಣ್ಣಿನ ವಾರ್ಷಿಕ 2-3 ಕಿಲೋ ಒಣ ಸಾವಯವ ಪದಾರ್ಥ ಮತ್ತು 10-20 ಕಿಲೋ ಹಸಿ ಸೊಪ್ಪು ಲಾಭದ ರೂಪದಲ್ಲಿ ಬೆಳೆಯುತ್ತದೆ. ಕೊಕ್ಕೋ ಸಸಿ ನೆಟ್ಟು ಎರಡನೇ ವರ್ಷಕ್ಕೆ ಫಸಲು ಲಭಿಸುತ್ತದೆ. ಹಲವಾರು ಕಾರಣಗಳಿಂದ ಕೊಕ್ಕೋ ಬೆಳೆ ಉತ್ತಮ ಫಸಲು ಕೊಟ್ಟು ರೈತನ ಪಾಲಿಗೆ ಲಾಭದಾಯಕ ಬೆಳೆಯಾಗಿ ಗುರುತಿಸಿಕೊಳ್ಳುತ್ತಾ ಉತ್ಪಾದನೆಯನ್ನೂ ಹೆಚ್ಚಿಸಿಕೊಂಡಿದೆ. ಕೊಕ್ಕೋ ಬೆಳೆಯ ಪ್ರಮಾಣ ಸುಮಾರು 1 ಸಾವಿರ ಹೆಕ್ಟೇರ್‌ಗಳಾಗಿದೆ.
ಪುತ್ತೂರು ತಾಲೂಕಿನಲ್ಲಿ ಸುಮಾರು 275 ಹೆಕ್ಟೇರ್ ಸುಳ್ಯದಲ್ಲಿ ಸುಮಾರು 165 ಹೆಕ್ಟೇರ್ ಪ್ರದೇಶ.
ಕೊಕ್ಕೋ ಬೆಳೆಯನ್ನು ಸುಮಾರು 50 ದೇಶಗಳಲ್ಲಿ ಬೆಳೆಯಲಾಗುತ್ತಿದೆ.
4.25 ಮಿಲಿಯ ಟನ್ ಕೊಕ್ಕೋ ಉತ್ಪಾದನೆ. ಭಾರತದಲ್ಲಿ ವಾರ್ಷಿಕ ಸುಮಾರು 18 ಸಾವಿರ ಟನ್.
ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಸುಮಾರು 47 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೊಕ್ಕೋ.
ಕೊಕ್ಕೋ ಆಧಾರಿತ ಚಾಕಲೇಟುಗಳಿಗೆ ಬೇಡಿಕೆ.
ಭಾರತದಲ್ಲಿ ಬೇಡಿಕೆ ಸುಮಾರು 32 ಸಾವಿರ ಟನ್‌ಗಳಷ್ಟಿದೆ.
ಕೆ.ಜಿ.ಯೊಂದಕ್ಕೆ 50-60 ರೂ. ಸ್ಥಿರತೆಯ ಧಾರಣೆ.
ಕೊಕ್ಕೋ ವ್ಯವಹಾರದಲ್ಲಿ ಶೇ. 70 ಬಹುರಾಷ್ಟ್ರೀಯ ಕಂಪೆನಿ ಹತೋಟಿ. – ರಾಜೇಶ್ ಪಟ್ಟೆ, ಪುತ್ತೂರು