Advertisement

ಕ್ಯಾನ್ಸರ್‌ ತಡೆಗೆ ಮುನ್ನೆಚ್ಚರಿಕೆ ಅಗತ್ಯ

09:33 PM Feb 04, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಕ್ಯಾನ್ಸರ್‌ ರೋಗ ಇತ್ತೀಚಿನ ದಿನಗಳಲ್ಲಿ ವ್ಯಾಪಿಸುತ್ತಿದೆ. ಇಂದಿನ ಆರಾಮದಾಯಕ ಜೀವನ ಶೈಲಿ ಮನುಷ್ಯನ ಆರೋಗ್ಯಕ್ಕೆ ಕುತ್ತು ತಂದಿದೆ. ಪ್ರತಿಯೊಂದಕ್ಕೂ ನಡಿಗೆ ಇಲ್ಲದೇ ವಾಹನ ಅವಲಂಬಿಸುವುದು ಹೆಚ್ಚಾಗಿರುವುದರಿಂದ ದೇಹ ನಾನಾ ರೀತಿಯ ಕಾಯಿಲೆಗಳಿಗೆ ಸುಲಭವಾಗಿ ತುತ್ತಾಗುತ್ತಿದೆ ಎಂದು ಶಾಸಕ ಡಾ.ಕೆ.ಸುಧಾಕರ್‌ ಹೇಳಿದರು.

Advertisement

ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಹಾಗೂ ಬೆಂಗಳೂರಿನ ಶಂಕರ್‌ ಕ್ಯಾನ್ಸರ್‌ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಅರಿವು ಕೊರತೆ: ಇತ್ತೀಚಿನ ದಿನಗಳಲ್ಲಿ ಬಡವರು ಹೆಚ್ಚಾಗಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಯಾವುದೇ ಕಾಯಿಲೆ ಬರುತ್ತದೆ ಎಂದರೆ ಅದರ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಅದರಿಂದ ನಾವು ದೂರ ಉಳಿಯಬಹುದು. ಆದರೆ ಅರಿವಿನ ಹಾಗೂ ಆರೋಗ್ಯ ಶಿಕ್ಷಣ ಕೊರತೆಯಿಂದ ರೋಗ ಪ್ರಮಾಣ ಹೆಚ್ಚಾಗುತ್ತಿದೆ ಎಂದರು. ಹಳ್ಳಿಗಾಡಿನಲ್ಲಿ ದುಶ್ಚಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ ಎಂದರು.

ಕ್ಯಾನ್ಸರ್‌ ರೋಗಿಯನ್ನು ಒಮ್ಮೆ ನೋಡಿದರೆ ಸಾಕು ಮತ್ತೆ ಯಾರೂ ಮದ್ಯಪಾನ, ಧೂಮಪಾನ, ತಂಬಾಕು ತಂಟೆಗೆ ಹೋಗುವುದಿಲ್ಲ. ಮನುಷ್ಯ ತನ್ನ ದೇಹವನ್ನು ಯಾವ ರೀತಿ ಆರೋಗ್ಯವಾಗಿ ಇಟ್ಟುಕೊಳ್ಳುತ್ತಾನೆಯೇ ಆ ರೀತಿ ದೇಹ ಸ್ಪಂದನೆ ಮಾಡುತ್ತದೆ. ಪ್ರತಿಯೊಬ್ಬರು ವೈಯಕ್ತಿಕವಾಗಿ ಶಾರೀರಕ ಹಾಗೂ ಮಾನಸಿಕ ಆರೋಗ್ಯದ ಕಡಗೆ ಕಾಳಜಿ ವಹಿಸಬೇಕೆಂದರು.

ಗುಣಮುಖ ಸಾಧ್ಯ: ಕ್ಯಾನ್ಸರ್‌ ಕೂಡ ಗುಣಮುಖವಾಗುವಂತಹ ರೋಗ, ಆತಂಕ ಪಡುವ ಅಗತ್ಯವಿಲ್ಲ. ಎರಡು, ಮೂರನೇ ಹಂತದಲ್ಲಿರುವ ಕ್ಯಾನ್ಸರ್‌ ರೋಗಿ ಕೂಡ ಇಂದು ಗುಣಮುಖರಾಗುವ ಸಂದರ್ಭ, ಸನ್ನಿವೇಶಗಳನ್ನು ನೋಡಿದ್ದೇವೆ. ಆದರೆ ಬಹಳಷ್ಟು ಜನ ಕ್ಯಾನ್ಸರ್‌ ತಪಾಸಣೆಗೆ ಮುಂದಾಗುವುದಿಲ್ಲ ಎಂದರು. ಮಹಿಳೆಯರಿಗೂ ಸ್ತನ ಕ್ಯಾನ್ಸರ್‌ ಸಾಮಾನ್ಯವಾಗಿದೆ. 35 ವರ್ಷಕ್ಕೆಲ್ಲಾ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿದೆ ಎಂದು ಶಾಸಕ ಡಾ.ಕೆ.ಸುಧಾಕರ್‌ ಕಳವಳ ವ್ಯಕ್ತಪಡಿಸಿದರು.

Advertisement

ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಮಾತನಾಡಿ, ಬಹಳಷ್ಟು ಕಾಯಿಲೆಗಳನ್ನು ನಾವಾಗೇ ತಂದುಕೊಳ್ಳುತ್ತೇವೆ. ಧೂಮಪಾನ, ಜರ್ದಾ, ಗುಟ್ಕಾ ಮತ್ತಿತರ ದುಶ್ಚಟಗಳಿಗೆ ವಿದ್ಯಾರ್ಥಿಗಳು, ಯುವಜನತೆ ಬಲಿಯಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕಾರ್ಮಿಕರು ಧೂಪಮಾನ, ಮದ್ಯಪಾನ, ತಂಬಾಕು ಸೇವನೆ, ಕಡ್ಡಿಪುಡಿ ಸೇವನೆಗಳಿಂದ ಕ್ಯಾನ್ಸರ್‌ಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ಬಹಳಷ್ಟು ಮಂದಿ ಆರ್ಥಿಕವಾಗಿ ಬಡವರಾಗಿರುವುದರಿಂದ ಚಿಕಿತ್ಸೆ ಪಡಯಲು ಸಾಧ್ಯವಾಗದೇ ಮೃತರಾಗುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಎಪಿಎಂಸಿ ಅಧ್ಯಕ್ಷ ನಾರಾಯಣಪ್ಪ, ಜಿಲ್ಲಾಧಿಕಾರಿ ಆರ್‌.ಲತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಬಿ.ಯೋಗೇಶ್‌ಗೌಡ, ತಾಪಂ ಮಾಜಿ ಅಧ್ಯಕ್ಷ ಮೋಹನ್‌ ಹಾಗೂ ಶ್ರೀ ಶಂಕರ್‌ ಕ್ಯಾನ್ಸರ್‌ ಸಂಸ್ಥೆಯ ವೈದ್ಯ ಡಾ.ಶ್ರೀನಾಥ್‌ ಉಪಸ್ಥಿತರಿದ್ದರು.

ಕ್ಯಾನ್ಸರ್‌ ತಪಾಸಣಾ ಶಿಬಿರಲ್ಲಿ ಜನ ಸಾಮಾನ್ಯರನ್ನು ಸೇರಿಸದೆ ಬರೀ ಆಶಾ ಕಾರ್ಯಕರ್ತೆಯರನ್ನು ಸೇರಿಸಿದ್ದಕ್ಕೆ ಶಾಸಕ ಡಾ.ಕೆ.ಸುಧಾಕರ್‌ ಬೇಸರ ವ್ಯಕ್ತಪಡಿಸಿದರು. ಕ್ಯಾನ್ಸರ್‌ ರೋಗದ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವುದು ಅನಿರ್ವಾಯ. ಇಂತಹ ಶಿಬಿರಗಳಿಗೆ ಜನ ಸಾಮಾನ್ಯರನ್ನು ಕರೆ ತರಬೇಕು. ಅಧಿಕಾರಿಗಳು ಅಥವಾ ಬುದ್ಧಿವಂತರನ್ನು ಸೇರಿಸಿ ಇತಂಹ ಶಿಬಿರಗಳು ಆಯೋಜಿಸಿದರೆ ಏನು ಪ್ರಯೋಜನವಾಗುವುದಿಲ್ಲ ಎಂದು ಅಧಿಕಾರಿಗಳಿಗೆ ಮಾರ್ಮಿಕವಾಗಿ ಸೂಚಿಸಿದರು.

ಆರೂರು ಸಮೀಪ ನಿರ್ಮಿಸಲಾಗುತ್ತಿರುವ ಸರ್ಕಾರಿ ವೈದ್ಯಕೀಯ ಶಿಕ್ಷಣ ಕಾಲೇಜನ್ನು ಬರೀ ಕಾಲೇಜಿಗೆ ಮಾತ್ರ ಸೀಮಿತಗೊಳಿಸದೆ ಅಲ್ಲಿ ಆರೋಗ್ಯ ನಗರವನ್ನು ನಿರ್ಮಿಸುವ ಸಂಕಲ್ಪ ಮಾಡಲಾಗಿದೆ. ವಿಶೇಷವಾಗಿ ಬಡವರನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಮೆಡಿಕಲ್‌ ಕಾಲೇಜಿನಲ್ಲಿ 1000 ಹಾಸಿಗೆಗಳ ಆಸ್ಪತ್ರೆ ಜೊತೆಗೆ ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ದೊರೆಕಿಸುವ ದಿಸೆಯಲ್ಲಿ ಮೂಲ ಸೌಕರ್ಯ ಒದಗಿಸಲಾಗುವುದು. ವಿಶೇಷವಾಗಿ ವಿವಿಧ ಬಗೆಯ ಸೂಪರ್‌ ಸೆಷ್ಟಾಲಿಸಿ ಆಸ್ಪತ್ರೆಯ ಯೂನಿಟ್‌ಗಳನ್ನು ತೆರೆಯಲಾಗುವುದು.
-ಡಾ.ಕೆ.ಸುಧಾಕರ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next