ದಾವಣಗೆರೆ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವರಮಾನಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಖಾಸಗಿ ಬಸ್‌ಗಳ ಹಾವಳಿ ನಿಲ್ಲಿಸಲು ಒತ್ತಾಯಿಸಿ ಕೆಎಸ್ಸಾರ್ಟಿಸಿ ಸ್ಟಾಪ್ ಆ್ಯಂಡ್ ವರ್ಕರ್ ಯೂನಿಯನ್(ಎಐಟಿಯುಸಿ) ನೇತೃತ್ವದಲ್ಲಿ ಗುರುವಾರ ಸಿಬ್ಬಂದಿ, ಕಾರ್ಮಿಕರು ಪ್ರತಿಭಟನೆ ನಡೆಸಿದರು. ಸರ್ಕಾರಿ ನಿಯಮದ ಪ್ರಕಾರ ಖಾಸಗಿ ಬಸ್‌ಗಳು ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಿಂದ 500 ಮೀಟರ್ ಆಚೆ ನಿಲ್ಲಿಸಿ, ಪ್ರಯಾಣಿಕರನ್ನು ಕರೆದೊಯ್ಯಬೇಕಿದೆ.
ಆದರೆ, ದಾವಣಗೆರೆಯಲ್ಲಿ ಕಾನೂನು ವಿರುದ್ಧವಾಗಿಯೇ ಬಸ್ ನಿಲ್ದಾಣ ಬಳಿಯೇ ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಅನೇಕ ಸಂದರ್ಭದಲ್ಲಿ ಖಾಸಗಿ ಬಸ್ ಸಿಬ್ಬಂದಿ ಬಸ್ ನಿಲ್ದಾಣದ ಒಳಕ್ಕೆ ಬಂದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನೂ ಕರೆದೊಯ್ಯುತ್ತಾರೆ. ಇದರಿಂದ ಸಂಸ್ಥೆಯ ವರಮಾನಕ್ಕೆ ಸಾಕಷ್ಟು ಪೆಟ್ಟು ಬೀಳುತ್ತಿದೆ. ಈ ಕೂಡಲೇ ಖಾಸಗಿ ಬಸ್‌ಗಳ ಹಾವಳಿ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳು, ಸ್ವಾತಂತ್ರ ಹೋರಾಟಗಾರರು, ಹಿರಿಯ ನಾಗರಿಕರು, ಅಂಗವಿಲಕರಿಗೆ ಹಲವಾರು ರೀತಿಯ ಸೌಲಭ್ಯ ನೀಡುತ್ತಿದೆ. ಎಲ್ಲ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುತ್ತಿದೆ. ಅಲ್ಲದೆ ಪ್ರಯಾಣಿಕರ ಹಿತದೃಷ್ಟಿಯಿಂದ ಅಪಘಾತ ವಿಮಾ ಸವಲತ್ತನ್ನೂ ನೀಡಲಾಗುತ್ತಿದೆ. ಪ್ರಯಾಣಿಕರು ಎಷ್ಟೇ ಮಂದಿಯೇ ಇರಲಿ ಸರಿಯಾದ ಸಮಯಕ್ಕೆ ಸಂಚರಿಸುತ್ತವೆ.
ಆದರೆ, ಖಾಸಗಿ ಬಸ್‌ಗಳಲ್ಲಿ ಇಂಥದ್ದನ್ನು ನಿರೀಕ್ಷೆ ಮಾಡುವಂತಿಲ್ಲ. ನಾಗರಿಕರಿಗೆ ವಿವಿಧ ಸೌಲಭ್ಯ ನೀಡುತ್ತಿರುವುದು ಸಂಸ್ಥೆಗೆ ಬರುವ ವರಮಾನದಿಂದ. ಅಂಥಹ ವರಮಾನಕ್ಕೆ ಧಕ್ಕೆ ಉಂಟಾದರೆ ಮುಂದೊಂದು ದಿನ ಸಂಸ್ಥೆಯನ್ನೇ ಮುಚ್ಚಬೇಕಾದೀತು. 1.25 ಲಕ್ಷಕ್ಕೂ ಹೆಚ್ಚು ಜನರು ಮತ್ತು ಅವರ ಅವಲಂಬಿತರು ಬೀದಿಗೆ ಬರುವ ವಾತಾವರಣ ನಿರ್ಮಾಣ ಆಗಬಹುದು ಎಂದು ತಿಳಿಸಿದರು.
ಖಾಸಗಿ ಬಸ್‌ಗಳ ಸಂಚಾರಕ್ಕೆ ಸಂಘಟನೆಯ ಯಾವುದೇ ವಿರೋಧ ಇಲ್ಲ. ಆದರೆ, ನಿಯಮದಂತೆ ಸಂಚರಿಸಬೇಕು. ನಿಗದಿತ ಮಾನದಂಡ, ಸೂಚನೆ ಕಟ್ಟುನಿಟ್ಟಾಗಿ ಪಾಲಿಸಬೇಕು. ತಕ್ಷಣ ಖಾಸಗಿ ಬಸ್ ಗಳ ಹಾವಳಿ ನಿಲ್ಲಿಸಲು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ, ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಮುಂದಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕೆಎಸ್ಸಾರ್ಟಿಸಿ ಸ್ಟಾಪ್ ಅಂಡ್ ವರ್ಕರ್ ಯೂನಿಯನ್(ಎಐಟಿಯುಸಿ) ದಾವಣಗೆರೆ ವಿಭಾಗದ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ಹನುಮಂತಪ್ಪ ಇತರರು ಇದ್ದರು.