Advertisement

ಪ್ರತಿಷ್ಠೆಯ ಆಡಳಿತ-ಸೇವೆ; ಯಾರಿಗೆ ಹಾನಿ?

05:21 PM Dec 19, 2018 | Team Udayavani |

ಬಾಗಲಕೋಟೆ: ಜಿಲ್ಲೆಯ ಜಿಪಂ ಸಿಇಒ-ಡಿಡಿಪಿಐ ಹಾಗೂ ಶಿಕ್ಷಕರು-ಅಂಗನವಾಡಿ ಕಾರ್ಯಕರ್ತೆಯರ ಮಧ್ಯೆ ಪ್ರತಿಷ್ಠೆಯ ಸಂಘರ್ಷ ನಡೆಯುತ್ತಿದೆ ಎಂಬ ಆರೋಪವಿದ್ದು, ಇದರಿಂದ ಇಬ್ಬರಿಗೂ ಹಾನಿ ಇಲ್ಲ. ಆದರೆ, ಮಕ್ಕಳಿಗೆ ಮಾತ್ರ ಹಾನಿಯಾಗಲಿದೆ ಎಂಬ ಅಸಮಾಧಾನ ಪಾಲಕರಿಂದ ಕೇಳಿ ಬರುತ್ತಿದೆ.

Advertisement

ಹೌದು, ಜಿಪಂಗೆ ಸಿಇಒ ಆಗಿ ಐಎಎಸ್‌ ಅಧಿಕಾರಿ ಗಂಗೂಬಾಯಿ ಮಾನಕರ ಬಂದ ಬಳಿಕ ಇಂತಹವೊಂದು ಆರೋಪ ಕೇಳಿ ಬರುತ್ತಿದೆ. ಅಲ್ಲದೇ ಅವರು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಡುತ್ತಿದ್ದಾರೆ. ಪ್ರಭಾವಿಗಳ ಮೇಲೆ ಅವರ ಆಡಳಿತದ ಅಸ್ತ್ರ ಏಕೆ ತೋರಿಸುತ್ತಿಲ್ಲ ಎಂಬ ಪ್ರಶ್ನೆಯೂ ಜಿಪಂ ಅಧೀನದ ಹಲವು ಇಲಾಖೆಯ ಸಿಬ್ಬಂದಿ ಮಾಡುತ್ತಿದ್ದಾರೆ. 

ಪ್ರತಿಷ್ಠೆಯ ಆಡಳಿತವೇ?: ಸಿಇಒ ಮಾನಕರ ಹಾಗೂ ಡಿಡಿಪಿಐ ಎಂ.ಆರ್‌. ಕಾಮಾಕ್ಷಿ ಜಿಲ್ಲೆಯಲ್ಲಿ ಪ್ರತಿಷ್ಠೆಯ ಆಡಳಿತ ನಡೆಸುತ್ತಿದ್ದಾರೆ ಎಂದು ಮಾತು ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಮಾನಕರ ಸಣ್ಣ ಸಣ್ಣ ಸಿಬ್ಬಂದಿ ಮೇಲೆ ಅಮಾನತು ಎಂಬ ಅಸ್ತ್ರ ತೋರಿಸಿದರೆ, ಡಿಡಿಪಿಐ ಕಾಮಾಕ್ಷಿ ಅವರು, ಇಡೀ ಉತ್ತರಕರ್ನಾಟಕದ ಸಿಬ್ಬಂದಿ, ಜನರನ್ನೇ ಅವಮಾನಿಸುವ ರೀತಿ ಆಡಳಿತ ಮಾಡುತ್ತಿದ್ದಾರೆ ಎಂಬ ಆರೋಪ ಅವರವರ ಇಲಾಖೆಯ ಬಳಗವೇ ಆರೋಪ ಮಾಡುತ್ತಿದೆ.

ಇನ್ನು ಐಎಎಸ್‌ ಅಧಿಕಾರಿ ಆಗಿರುವ ಮಾನಕರ ಅವರು ಕೊಪ್ಪಳ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿದ್ದಾಗಿನಿಂದ ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ಸಲ್ಲಿಸಿದ ಸೇವೆಯನ್ನು ಕಂಡಿರುವ ಕೆಲವರು, ಅವರ ಆಡಳಿತವೇ ಹೀಗೆ. ಅವರು ಅಥವಾ ಅವರ ಆಡಳಿತದ ವೈಖರಿ ಬದಲಾಗಬೇಕು ಎನ್ನುವವರೂ ಇದ್ದಾರೆ. ಆದರೆ, ಮಕ್ಕಳ ಕಲಿಕೆಯಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ಕೈಗೊಂಡಿದ್ದು ತಪ್ಪಾ ? ಒಬ್ಬ ಐಎಎಸ್‌ ಅಧಿಕಾರಿ ಮೇಲೆಯೇ ಪ್ರತಿಭಟನೆ ಎಂಬ ಅಸ್ತ್ರ ಪ್ರಯೋಗಿಸಲಾಗಿದೆ ಎಂಬ ಮಾತನ್ನೂ ಕೆಲವೇ ಕೆಲವರು ಹೇಳುವವರೂ ಇದ್ದಾರೆ.

ಮಕ್ಕಳಿಗೇ ಹಾನಿ: ಸಿಇಒ ಅಥವಾ ಡಿಡಿಪಿಐ ಇಲ್ಲವೇ ಇನ್ಯಾವುದೇ ಇಲಾಖೆಯ ಅಧಿಕಾರಿಗಳು ಪ್ರತಿಷ್ಠೆ ಆಡಳಿತ ನಡೆಸಿದರೂ ಇದರಿಂದ ಅವರವರಿಗೆ ಹಾನಿಗಿಂತ, ಜಿಲ್ಲೆಯ ಮಕ್ಕಳಿಗೆ ಹಾನಿ ಯಾವುದರಲ್ಲಿ ಅನುಮಾನವಿಲ್ಲ. ನವನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.7ರಲ್ಲಿನ 12 ಜನ ಶಿಕ್ಷಕರ ಅಮಾನತು ವಿಷಯದಲ್ಲಿ ಅಧಿಕಾರಿ ವರ್ಗದಿಂದ ಅವಸರದ ನಿರ್ಧಾರ ಇಲ್ಲವೇ ದುರುದ್ದೇಶದ ಕ್ರಮ ಆಗಿರಬಹುದು. ಆದರೆ, ಜಿಲ್ಲೆಯ ಶಿಕ್ಷಕರು, ಯಾವ ಮಟ್ಟದಲ್ಲಿ ಮಕ್ಕಳಿಗೆ ಗುಣಮಟ್ಟದ ಕಲಿಕೆ ನಡೆಸಿದ್ದಾರೆ ಎಂಬುದು ಇಲ್ಲಿ ಪ್ರಮುಖವಾಗುತ್ತದೆ.

Advertisement

ಕೆಲವು ಶಿಕ್ಷಕರು, ಶಾಲೆಯ ಮುಖ ನೋಡುವುದು ವಾರಕ್ಕೊಮ್ಮೆ, ಇನ್ನು ಕೆಲವರು ಶಾಲೆಗೆ ಹೋದರೂ ಪಾಠ ಮಾಡುವುದು ವಿರಳ. ಇದು ಇಲಾಖೆ ಹಾಗೂ ಬಹುತೇಕ ಶಿಕ್ಷಕರಿಗೆ ಗೊತ್ತಿದೆ. ಇಂತಹ ಶಿಕ್ಷಕರ ಬಳಗ ಒಂದಿದ್ದರೆ, ಇನ್ನು ಪ್ರಾಮಾಣಿಕವಾಗಿ ಮಕ್ಕಳಿಗೆ ಕಲಿಕೆಯಲ್ಲಿ ತೊಡಗಿದವರ ಬಳಗವೂ ದೊಡ್ಡದಿದೆ. ಆದರೆ, ಶಾಲೆಯ ಮುಖವನ್ನು ವಾರಕ್ಕೊಮ್ಮೆ ನೋಡುವವರಿಂದ, ಇತರೇ ಪ್ರಾಮಾಣಿಕ ಶಿಕ್ಷಕರಿಗೂ ಕೆಟ್ಟ ಹೆಸರು ಬರುತ್ತಿರುವುದು ಸುಳ್ಳಲ್ಲ. ಆದರೆ, ಇದನ್ನು ಸರಿದಾರಿಗೆ ತರುವ ಕೆಲಸ ಅಷ್ಟು ಸುಲಭದ್ದಲ್ಲ. ಇಡೀ ವ್ಯವಸ್ಥೆಯನ್ನು ಒಂದೇ ವರ್ಷದಲ್ಲಿ ಸರಿದಾರಿಗೆ ತರಲು ಪ್ರಯತ್ನಿಸಿದರೆ ಅಧಿಕಾರಿಗಳೇ ಜಿಲ್ಲೆಯಿಂದ ಬೇರೆ ವರ್ಗವಾಗಿದ್ದಾರೆ ಹೊರತು, ಜಿಲ್ಲೆಯ ಆಡಳಿತ ವ್ಯವಸ್ಥೆ ಸರಿದಾರಿಗೆ ಬಂದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. 

ಜಿಪಂ ಸಿಇಒ ಜಿಲ್ಲೆಯ ಅಂಗನವಾಡಿ, ಶಾಲೆಗಳಿಗೆ ಭೇಟಿ ನೀಡಿ, ಜಿಡ್ಡುಗಟ್ಟಿದ ಆಡಳಿತಕ್ಕೆ ಚುರುಕು ಮೂಡಿಸುವ ಕಾರ್ಯದ ಬಗ್ಗೆ ಯಾರಿಗೂ ಬೇಸರ-ಪ್ರತಿರೋಧವಿಲ್ಲ. ಆದರೆ, ಗುರುವಿನ ಸ್ಥಾನದಲ್ಲಿರುವ ಹಿರಿಯ ಶಿಕ್ಷಕರೊಂದಿಗೆ ಆಡುವ ಮಾತುಗಳ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅಲ್ಲದೇ ಅವರು ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡುವ ಜತೆಗೆ ತಮ್ಮದೇ ಕಚೇರಿಯ ವಿವಿಧ ವಿಭಾಗದ ಸಿಬ್ಬಂದಿಯ ಕಾರ್ಯವೈಖರಿ, ಜಿಪಂ ವ್ಯಾಪ್ತಿಗೆ ಬರುವ ಪ್ರತಿಯೊಂದು ಇಲಾಖೆಯ ಜಿಲ್ಲಾ ಮತ್ತು ತಾಲೂಕು ಕಚೇರಿಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಪರಿಶೀಲಿಸಲಿ. ಮುಖ್ಯವಾಗಿ ಶಿಕ್ಷಣ ಇಲಾಖೆಯ ಪ್ರತಿ ಟೇಬಲ್‌ನ ಕಾರ್ಯಗಳನ್ನೂ ಸಿಇಓ ಪರಿಶೀಲನೆಗೆ ಮುಂದಾಗಲಿ. ಯಾವ ಟೇಬಲ್‌ಗೆ ದಿನದಿಂದ ಯಾವ ಫೈಲ್‌ ಬಂದಿದೆ. ಈ ವರೆಗೆ ಏಕೆ ವಿಲೇವಾರಿ ಆಗಿಲ್ಲ ಎಂಬುದನ್ನು ಆಡಳಿತದ ಒಳಗಣ್ಣಿನಿಂದ ನೋಡಲಿ ಎಂಬುದು ಹಲವರ ಒತ್ತಾಯ.

ಪುನಃ ಅದೇ ಶಾಲೆಗೆ ಭೇಟಿ
ಶಿಕ್ಷಕರು-ಅಂಗನವಾಡಿ ಕಾರ್ಯಕರ್ತರು ಶಾಲೆ ಬಂದ್‌ಗೊಳಿಸಿ ಮುಷ್ಕರ ನಡೆಸಲು ಕಾರಣವಾಗಿದ್ದ ನವನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.7ಕ್ಕೆ ಮಂಗಳವಾರ ಜಿಪಂ ಸಿಇಒ ಮತ್ತು ಡಿಡಿಪಿಐ ಅವರು ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಈ ಶಾಲೆಯ 12 ಜನ ಶಿಕ್ಷಕರ ಅಮಾನತು ಮಾಡಿದ ಹಿನ್ನೆಲೆಯಲ್ಲಿ ಶಿಕ್ಷಕರ ಸಂಘಟನೆಯವರು ಒಗ್ಗಟ್ಟಿನೊಂದಿಗೆ ಹೋರಾಟ ನಡೆಸಿದ್ದರು. ಸೋಮವಾರ ರಾತ್ರಿ ಅವರ ಅಮಾನತು ಆದೇಶ ರದ್ದುಗೊಳಿಸಿ, ಇನ್ನು ಮುಂದೆ ತಪ್ಪಾಗದಂತೆ ಎಚ್ಚರಿಕೆ ವಹಿಸಲು ಅಮಾನತು ಆದೇಶಕ್ಕೆ ಹಿಂದಕ್ಕೆ ಪಡೆದ ಪತ್ರದಲ್ಲಿ ಸೂಚಿಸಿದ್ದರು. ಹೀಗಾಗಿ ಆ ಶಿಕ್ಷಕರು ಮಂಗಳವಾರ ಶಾಲೆಗೆ ಬಂದಿದ್ದಾರೋ, ಇಲ್ಲವೋ ಹಾಗೂ ಮಕ್ಕಳ ಕಲಿಕೆಯ ಬುದ್ದಿಮಟ್ಟ ಪರಿಶೀಲಿಸಿದರು. 

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next