ಯಳಂದೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ವಾರ್ಡಿನ ಸದಸ್ಯರು ಶೌಚಾಲಯ ನಿರ್ಮಾಣ ಮಾಡದ ಮನೆಮನೆಗಳಿಗೆ ತೆರಳಿ ಇದನ್ನು ನಿರ್ಮಿಸಿಕೊಳ್ಳುವಂತೆ ಒತ್ತಡ ಹೇರಬೇಕು ಎಂದು ಗೌಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಸಲಹೆ ನೀಡಿದರು. ಅವರು ಪಂಚಾಯಿತಿ ಆವರಣದಲ್ಲಿ ನಡೆದ 2016-17 ನೇ ಸಾಲಿನ ಸಾಮಾಜಿಕ ಲೆಕ್ಕ ತಪಾಸಣೆ ಹಾಗೂ ಜಮಾಬಂಧಿ ಗ್ರಾಮಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿದರು. ಅಕ್ಟೋಬರ್ 2 ರಂದು ಇಡೀ ಯಳಂದೂರು ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತವಾಗಿ ಘೋಷಿಸಿಕೊಳ್ಳಲಾಗಿದೆ. ಪಂಚಾಯಿತಿಯೂ ಇದರಿಂದ ಹೊರತಾಗಿಲ್ಲ. ಆದರೆ, ನಾವು ಇನ್ನೂ ಶೇ.100 ಪ್ರಗತಿ ಸಾಧಿಸಿಲ್ಲ ಎಂದರು.
ವಡಗೆರೆಯಲ್ಲಿ 53, ಬನ್ನಿಸಾರಿಗೆ ಗ್ರಾಮದಲ್ಲಿ 58 ಕುಟುಂಬಗಳು ಇನ್ನೂ ಶೌಚಾಲಯ ನಿರ್ಮಿಸಿಕೊಂಡಿಲ್ಲ. ಇದರೊಂದಿಗೆ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ 9 ಗ್ರಾಮಗಳಲ್ಲೂ ಇನ್ನೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ತಮ್ಮ ಕುಟುಂಬದ ಗೌರವ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಿದರು.
ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳನ್ನು ಬದಲಿಸುವ ನೆಪದಲ್ಲಿ ಬೀದಿಗಳನ್ನು ಕತ್ತಲೆಯಲ್ಲಿ ಇರಿಸಲಾಗುತ್ತಿದೆ. ಆಲ್ಕೆರೆ ಅಗ್ರಹಾರದಿಂದ ಮದ್ದೂರು, ಬನ್ನಿಸಾರಿಗೆಯಿಂದ ಅಗರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಹಳ್ಳ ಬಿದ್ದಿದ್ದು ಇದನ್ನು ದುರಸ್ತಿ ಮಾಡುವಂತೆ ಸಾರ್ವಜನಿಕರು ದೂರು ಸಲ್ಲಿಸಿದರು. ಅಧ್ಯಕ್ಷರು ಈಗಾಗಲೇ ರಸ್ತೆ ಕಾಮಗಾರಿಗೆ ಲೊಕೋಪಯೋಗಿ ಇಲಾಖೆಯಿಂದ ಭೂಮಿ ಪೂಜೆ ನಡೆದಿದ್ದು ಕಾಮಗಾರಿ ಆರಂಭವಾಗಲಿದೆ. ಗ್ರಾಮದಲ್ಲಿ ಬೀದಿ ದೀಪಗಳ ಬಗ್ಗೆ ಸಂಬಂಧಪಟ್ಟ ನೌಕರರಿಗೆ ಸೂಚನೆ ನೀಡಿ ಕ್ರಮ ವಹಿಸುವ ಭರವಸೆ ನೀಡಿದರು. ಗ್ರಾಪಂ ಸದಸ್ಯರಾದ ಸೋಮಶೇಖರ್, ಅನಿತಾ, ಮಹದೇವಮ್ಮ, ಸುಂದ್ರಮ್ಮ, ಸರೋಜ, ಪುಟ್ಟತಾಯಮ್ಮ, ಪ್ರಭುಸ್ವಾಮಿ, ಉಮಾಪತಿ, ಮಹೇಶ್, ಮಹದೇವಸ್ವಾಮಿ ಇದ್ದರು.