Advertisement

ವಾದದಿಂದ ಹಿಂದೆ ಸರಿಸಲು ಒತ್ತಡಕ್ಕೆ ತೀರ್ಮಾನ

11:05 AM Jan 28, 2018 | Team Udayavani |

ಬೆಂಗಳೂರು: ಮಹದಾಯಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆತ್ಮಾನಂದ ನಾಡಕರ್ಣಿ ಗೋವಾ ಪರ ವಾದ ಮಾಡದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಜೆಡಿಎಸ್‌ನ ಕೋನರೆಡ್ಡಿ ಮಾಡಿದ ಪ್ರಸ್ತಾಪಕ್ಕೆ ಬಿಜೆಪಿ ಮುಖಂಡರು ಸಮ್ಮತಿ ಸೂಚಿಸಿದ್ದಾರೆನ್ನಲಾಗಿದೆ.

Advertisement

ಮಹದಾಯಿ ವಿವಾದ ಸಂಬಂಧ ಶನಿವಾರ ವಿಧಾನಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ರೈತ ಮುಖಂಡರು, ರಾಜಕೀಯ ಪಕ್ಷಗಳ ನಾಯಕರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

“ನ್ಯಾಯ ಮಂಡಳಿ ಸೂಚನೆ ಮೇರೆಗೆ ಮಾತುಕತೆಗೆ ಕರೆಯುವಂತೆ ಗೋವಾ ಮುಖ್ಯಮಂತ್ರಿಗೆ ಈಗಾಗಲೇ ಎರಡು ಬಾರಿ ಪತ್ರ ಬರೆದಿದ್ದೇನೆ. ಅವರು ಯಾವುದೇ ಸಮಯದಲ್ಲಿ ಮಾತುಕತೆಗೆ ಕರೆದರೂ ಹೋಗಲು ಸಿದಟಛಿ. ಮಹದಾಯಿ ವಿಷಯದಲ್ಲಿ ಯಾವುದೇ ಪ್ರತಿಷ್ಠೆ ಇಟ್ಟುಕೊಂಡಿಲ್ಲ. ಅವರು ಮಾತುಕತೆಗೆ ಕರೆದರೆ, ಗೋವಾ ಕಾಂಗ್ರೆಸ್‌ ಮುಖಂಡರೊಂದಿಗೂ ಮಾತುಕತೆ ನಡೆಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನೊಂದು ಬಾರಿ ಪ್ರಧಾನಿಗೆ ಪತ್ರ ಬರೆದು ಸರ್ವ ಪಕ್ಷ ನಿಯೋಗ ಕರೆದುಕೊಂಡು ಬರಲು ಸಮಯ ನೀಡುವಂತೆ ಮನವಿ ಮಾಡುವುದಾಗಿ ಹೇಳಿದರು. 40 ವರ್ಷದ ರಾಜಕಾರಣದಲ್ಲಿ ಅನೇಕ ಅಂತಾರಾಜ್ಯ ನದಿ ವಿವಾದಗಳ ಸಭೆಗಳಲ್ಲಿ ಪಾಲ್ಗೊಂಡಿದ್ದೇನೆ. ಬೇರೆ ರಾಜ್ಯದ ಪ್ರತಿಪಕ್ಷದ ಮುಖಂಡರನ್ನು ಒಪ್ಪಿಸುವಂತೆ ಷರತ್ತು ಹಾಕಿದ್ದು ಕೇಳಿಲ್ಲ. ಆದರೆ, ಬಿಜೆಪಿಯವರು ಅದನ್ನೇ ಪಟ್ಟು ಹಿಡಿದು ಕುಳಿತಿದ್ದಾರೆ ಎಂದು ತಿಳಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮಧ್ಯಸ್ಥಿಕೆ ವಹಿಸಬೇಕೆಂಬ ಬಿಜೆಪಿಯವರ ಬೇಡಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಿಎಂ, ಅವರೇನು ಅಧಿಕಾರದಲ್ಲಿದ್ದಾರ ? ಆಗದಿರುವ ವಿಷಯವನ್ನು ಹೇಳಿ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಮಾತುಕೊಟ್ಟಂತೆ ನಡೆದುಕೊಳ್ಳಲಿ -ಶೆಟ್ಟರ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ನಡೆದ ಸರ್ವ ಪಕ್ಷಗಳ 
ಮುಖಂಡರ ಸಭೆಯಲ್ಲಿ ಗೋವಾ ಕಾಂಗ್ರೆಸ್‌ ಮುಖಂಡರ ಮನವೊಲಿಸುವುದಾಗಿ ಹೇಳಿದ್ದರು. ಅದರಂತೆ ಅವರು ನಡೆದುಕೊಳ್ಳಲಿ. ಈಗ ಮಾತು ಬದಲಾಯಿಸಿ, ಆ ರೀತಿ ಹೇಳಿಯೇ ಇಲ್ಲ ಎಂದು ವಾದಿಸುತ್ತಿದ್ದಾರೆ.

ಈಗಲೂ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಒಗ್ಗಟ್ಟಾಗಿ ನಿಂತರೆ ಸಮಸ್ಯೆ ಬಗೆ ಹರಿಯಲಿದೆ. ಅದನ್ನು ಬಿಟ್ಟು ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯ ಮಾಡುವುದು ಪ್ರತಿಷ್ಠೆಯಾಗಿದೆ ಎಂದು ಬಿಜೆಪಿಯ ಜಗದೀಶ್‌ ಶೆಟ್ಟರ್‌ ಆರೋಪಿಸಿದರು.

ಚುನಾವಣೆ ಬಹಿಷ್ಕಾರ, ಪತ್ರ ಚಳವಳಿ?
ಬೆಂಗಳೂರು:
ಮಹದಾಯಿ ವಿವಾದ ಬಗೆ ಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ನಡವಳಿಕೆ ಬೇಸರ ತಂದಿದೆ. ಹೀಗಾಗಿ ಚುನಾವಣೆ ಬಹಿಷ್ಕಾರ ಅಥವಾ ರಾಷ್ಟಪತಿ ಮತ್ತು ಪ್ರಧಾನಿಗೆ ಪತ್ರ ಬರೆಯುವ ಚಳವಳಿ ನಡೆಸುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮಹದಾಯಿ ಹೋರಾಟಗಾರ, ರೈತ ಸೇನೆ ಅಧ್ಯಕ್ಷ ವಿರೇಶ್‌ ಸೊಬರದಮಠ ಹೇಳಿದ್ದಾರೆ. ಫೆ.4 ರಂದು ಕನ್ನಡ ಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ನಾವು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಆಗಮಿಸಿ ಬಂದ್‌ ಮಾಡಲು ಆಗುವುದಿಲ್ಲ. ಸಾರ್ವಜನಿಕರಿಗೆ ತೊಂದರೆ ಕೊಡುವ ಬಂದ್‌ಗೆ ನಮ್ಮ ಬೆಂಬಲ ಇಲ್ಲ.ಅಂದು ನಡೆಯುವ ಬಂದ್‌ಗೆ ಬೆಂಬಲ ನೀಡುವ ಕುರಿತು ರೈತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದರು.

ಪ್ರಧಾನಿ ಮೋದಿ ಮಧ್ಯ ಪ್ರವೇಶ ಮಾಡದಿದ್ದಲ್ಲಿ ಸಮಸ್ಯೆ ಬಗೆ ಹರಿಯುವುದಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನಿ ಪಾತ್ರ ಮಹತ್ವದ್ದಾಗಿದೆ. ರಾಜ್ಯ ರಾಜ್ಯಗಳ ವಿಚಾರದಲ್ಲಿ ತಾರತಮ್ಯ ಬಂದಾಗ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಬಂದ್‌ ಆಚರಣೆಯಿಂದ ಯಾವುದೇ ಲಾಭವಿಲ್ಲ.
– ಜಿ.ವಿ. ಶ್ರೀರಾಮರೆಡ್ಡಿ,
ಸಿಪಿಐ(ಎಂ) ಮುಖಂಡ

ಮೋದಿಯವರು ಕೇವಲ ಬಿಜೆಪಿ ಪ್ರಧಾನಿಯಲ್ಲ, ಇಡೀ ದೇಶದ ಪ್ರಧಾನಿ. ಸಭೆಯಲ್ಲಿ ಒಗ್ಗಟ್ಟಿನ ತೀರ್ಮಾನ ಆಗಬೇಕಿತ್ತು. ಫೆ.4ರೊಳಗೆ ಪ್ರಧಾನಿ ರಾಜ್ಯಕ್ಕೆ ಬರುವ ಮೊದಲು ಬಿಜೆಪಿಯವರು ಏನಾದರೂ ತೀರ್ಮಾನ ಮಾಡಲಿ.
–  ಕೋನರೆಡ್ಡಿ, ಜೆಡಿಎಸ್‌ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next