ಬೆಂಗಳೂರು: ಹೊಸಬರಿಗೆ ಅವಕಾಶ ಮಾಡಿಕೊಡಲು ಚುನಾವಣ ನಿವೃತ್ತಿ ಘೋಷಿಸಿದ್ದೆ. ಆದರೆ ಎಲ್ಲೆಡೆಯಿಂದಲೂ ನನ್ನ ಸ್ಪರ್ಧೆಗೆ ಒತ್ತಡ ಹೆಚ್ಚುತ್ತಿದೆ. ಈ ಹಂತದಲ್ಲಿ ಏನೂ ಹೇಳಲಾರೆ. ಕಾಲ ಕೂಡಿ ಬರಲಿ. ಏನಾಗುತ್ತದೆಂದು ನೋಡೋಣ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣದಲ್ಲಿ ನಾವು ತೆಗೆದುಕೊಳ್ಳುವ ನಿಲುವುಗಳು ಒಮ್ಮೊಮ್ಮೆ ವೈಯಕ್ತಿಕ ಹಾಗೂ ಪಕ್ಷಾಧಾರಿತವಾಗಿ ಭಿನ್ನವಾಗಿರುತ್ತದೆ. ಹೊಸ ವ್ಯಕ್ತಿಗಳು ಬರಲಿ ಎಂದು ಚುನಾವಣ ರಾಜಕಾರಣದಿಂದ ದೂರ ಉಳಿಯುವುದಾಗಿ ಹೇಳಿದ್ದೆ. ಆದರೆ ಈಗ ಒತ್ತಡ ಹೆಚ್ಚಿದೆ ಎಂದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂಗಳಾದ ಆರ್.ಅಶೋಕ್, ಡಾ| ಅಶ್ವತ್ಥನಾರಾಯಣ, ದಾಸರಹಳ್ಳಿಯ ಶಾಸಕರು ಮನೆಗೆ ಬಂದು ಯಾವುದೇ ಕಾರಣಕ್ಕೂ ಈ ಬಾರಿ ಹಿಂದೆ ಸರಿಯದಂತೆ ಹೇಳಿದ್ದಾರೆ.
ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಕೂಡ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವ ಆಗಬಾರದು ಎಂದಿದ್ದಾರೆ. ಬೈರತಿ ಬಸವರಾಜ ಕೂಡ ಅದೇ ಮಾತನಾಡಿದ್ದಾರೆ.
ಬ್ಯಾಟರಾಯನಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮೇಶ್ ಗೌಡ, ಕಾಂಗ್ರೆಸ್‌ನ ನೇತಾರರು ಸದಾನಂದ ಗೌಡರೇ ಸ್ಪರ್ಧಿಸಬೇಕು ಎಂದಿದ್ದಾರೆ. ಇವೆಲ್ಲವೂ ಮನಸ್ಸಿಗೆ ತುಂಬಾ ಸಂತೋಷ ತಂದಿದೆ ಎಂದರು.