Advertisement

ಸುಮಲತಾ ಸ್ಪರ್ಧೆಗೆ ಹೆಚ್ಚಿದ ಒತ್ತಡ

01:01 AM Feb 06, 2019 | Team Udayavani |

ಮಂಡ್ಯ: ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ನ ಕೈತಪ್ಪಿ ಹೋದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್‌ ಅವರನ್ನು ಕಣಕ್ಕಿಳಿಸುವುದಕ್ಕೆ ಅಭಿಮಾನಿಗಳಿಂದ ಒತ್ತಡ ಹೆಚ್ಚಾಗುತ್ತಿದೆ.

Advertisement

ಸ್ಪರ್ಧೆಗೆ ಆಸಕ್ತಿ ತೋರಿರುವಂತೆ ಕಂಡು ಬಂದಿರುವ ಸುಮಲತಾ ಫೆ.11ರಂದು ಅಧಿಕೃತವಾಗಿ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆಂದು ಹೇಳಲಾಗುತ್ತಿದೆ. ಸುಮಲತಾ ಚುನಾವಣೆಗೆ ಸ್ಪರ್ಧಿಸಿದಲ್ಲಿ ಕನ್ನಡ ಚಿತ್ರರಂಗದ ಜತೆಗೆ ತೆಲುಗು ಚಿತ್ರರಂಗದವರೂ ಬೆಂಬಲವಾಗಿ ನಿಲ್ಲುವುದು ಈಗಾಗಲೇ ನಿಶ್ಚಿತವಾಗಿದೆ. ಇದನ್ನು ಮನಗಂಡಿರುವ ಅಭಿಮಾನಿಗಳು, ಪಕ್ಷಗಳ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸುಮಲತಾ ಅವರ ಮನವೊಲಿಕೆಯಲ್ಲಿ ತೊಡಗಿದ್ದಾರೆ.

ಮಂಡ್ಯ ಕ್ಷೇತ್ರಕ್ಕೆ ಪಟ್ಟು: ಕಾಂಗ್ರೆಸ್‌ ಜೆಡಿಎಸ್‌ ಸೀಟು ಹಂಚಿಕೆ ವಿಷಯದಲ್ಲಿ ಮಂಡ್ಯ ಕ್ಷೇತ್ರವನ್ನು ಬಿಟ್ಟು ಕೊಡುವಂತೆ ಸ್ಥಳೀಯ ಕಾಂಗ್ರೆಸ್ಸಿಗರು ಪಟ್ಟು ಹಿಡಿದಿದ್ದಾರೆ. ಮಂಡ್ಯ ಜಿಲ್ಲೆ ಮೂಲತಃ ಒಕ್ಕಲಿಗ ಪ್ರಧಾನ ಜಿಲ್ಲೆಯಾಗಿರುವುದರಿಂದ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್‌ ವರಿಷ್ಠರೆದುರು ಬೇಡಿಕೆ ಇಟ್ಟಿದ್ದಾರೆ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟರೆ ಒಕ್ಕಲಿಗರ ಓಟುಗಳು ಕಾಂಗ್ರೆಸ್‌ನ ಕೈ ಬಿಟ್ಟು ಹೋಗಬಹುದೆಂಬ ಆತಂಕವೂ ಕಾಂಗ್ರೆಸ್‌ನವರಲ್ಲಿದೆ. ಅದಕ್ಕಾಗಿ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಒಕ್ಕಲಿಗ ಓಟ್ಬ್ಯಾಂಕ್‌ ಉಳಿಸಿಕೊಳ್ಳಲು ಮಂಡ್ಯ ಕ್ಷೇತ್ರವನ್ನು ಬಿಟ್ಟು ಕೊಡುವಂತೆ ಹಠ ಹಿಡಿದಿದೆ.

ಈ ಮಧ್ಯೆ, ಮಂಡ್ಯ ಹಾಗೂ ಹಾಸನ ಅತ್ಯಂತ ಸುರಕ್ಷಿತ ಕ್ಷೇತ್ರವಾಗಿರುವುದರಿಂದ ಈ ಎರಡೂ ಕ್ಷೇತ್ರಗಳನ್ನು ಬಿಟ್ಟುಕೊಡಲು ಜೆಡಿಎಸ್‌ ಒಪ್ಪುತ್ತಿಲ್ಲ. ಹಾಸನ ಕ್ಷೇತ್ರದಿಂದ ಪ್ರಜ್ವಲ್‌ ರೇವಣ್ಣ ಹಾಗೂ ಮಂಡ್ಯದಿಂದ ನಿಖೀಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವುದು ಜೆಡಿಎಸ್‌ನ ರಾಜಕೀಯ ಅಜೆಂಡಾ ಆಗಿದೆ. ಆದರೆ, ಮಂಡ್ಯವನ್ನು ಬಿಟ್ಟು ಕೊಡಲು ಜಿಲ್ಲೆಯ ಸ್ಥಳೀಯ ಕಾಂಗ್ರೆಸ್ಸಿಗರು ಒಪ್ಪುತ್ತಿಲ್ಲ. ಜೆಡಿಎಸ್‌, ಮಂಡ್ಯ ಕ್ಷೇತ್ರವನ್ನು ನಮಗೆ ಬಿಟ್ಟು ಕೊಡಬೇಕು. ಇಲ್ಲದಿದ್ದರೆ ಮೈತ್ರಿಯೇ ಬೇಡ ಎಂಬ ಸಂದೇಶವನ್ನು ಈಗಾಗಲೇ ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರಿಗೆ ರವಾನಿಸಿರುವುದು ವರಿಷ್ಠರಿಗೆ ತಲೆ ಬಿಸಿ ಉಂಟು ಮಾಡಿದೆ.

ಎಸ್‌.ಎಂ.ಕೃಷ್ಣ ಮನೆಗೆ ಶೀಘ್ರ ಭೇಟಿ: ಈ ಮಧ್ಯೆ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಸುಮಲತಾಗೆ ಮನೆಗೆ ಬರುವಂತೆ ಆಹ್ವಾನ ನೀಡಿದ್ದಾರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಶೀಘ್ರದಲ್ಲೇ ಸುಮಲತಾ ಅವರು ಕೃಷ್ಣ ಅವರ ಮನೆಗೆ ತೆರಳಿ ಮಾತುಕತೆ ನಡೆಸಿ, ಆಶೀರ್ವಾದ ಪಡೆಯಲಿದ್ದಾರೆ. ಬಿಜೆಪಿಯಿಂದ ಸುಮಲತಾ ಅವರನ್ನು ಕಣಕ್ಕಿಳಿಸಲು ಸಾಧ್ಯವಾಗದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಅವರನ್ನು ಬೆಂಬಲಿಸುವ ಬಗ್ಗೆಯೂ ಆ ಪಕ್ಷದೊಳಗೆ ಮಾತುಕತೆ ನಡೆಯುತ್ತಿವೆ. ಈ ಸಮಯದಲ್ಲಿ ಪಕ್ಷದಿಂದ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸು ವುದೋ, ಬೇಡವೋ ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ. ಜಿಲ್ಲೆಯೊಳಗೆ ಜೆಡಿಎಸ್‌ಗೆ ಗೆಲುವಿಗೆ ಬ್ರೇಕ್‌ ಹಾಕುವುದಕ್ಕೆ ಪೂರಕವಾದ ರಾಜಕೀಯ ತಂತ್ರಗಾರಿಕೆಗಳು ತೆರೆ ಮರೆಯಲ್ಲಿ ನಡೆಯುತ್ತಿವೆ ಎಂದು ಹೇಳಲಾಗಿದೆ.

Advertisement

ಮಂಡ್ಯದಿಂದ ಸುಮಲತಾ ರಾಜಕೀಯ ಪ್ರವೇಶ ಮಾಡಲು ಮುಂದಾದರೆ ಅವರಿಗೆ ಅಗತ್ಯ ಬೆಂಬಲವಿದೆ. ಅಂಬರೀಶ್‌ ಅವರ ಬಳಿಕ ಅವರ ಕುಟುಂಬದವರು ರಾಜಕೀಯಕ್ಕೆ ಬರಬೇಕೆಂಬ ಒತ್ತಾಯವಿದೆ. ಪಕ್ಷದ ಒಲವೂ ಇದೆ. ಆದರೆ, ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಸ್ಥಾನಗಳ ಹಂಚಿಕೆ ಮಾಡಿಲ್ಲ. ● ಎಂ.ಬಿ.ಪಾಟೀಲ, ಗೃಹ ಸಚಿವ.

● ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next