Advertisement

ಮಳೆ ಹಾನಿ ಜಂಟಿ ಸಮೀಕ್ಷೆಗೆ ಒತ್ತಾಯ

04:05 PM Aug 11, 2022 | Team Udayavani |

ಚಿಂಚೋಳಿ: ಸೇಡಂ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂಥ ರುದ್ನೂರು, ಭೂತಪೂರ, ರಾಯಕೋಡ, ಗಡಿಕೇಶ್ವಾರ, ಚಿಂತಪಳ್ಳಿ ಮುಂತಾದ ಗ್ರಾಮಗಳಲ್ಲಿ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ರಸ್ತೆ, ಸೇತುವೆ, ಬೆಳೆಗಳಿಗೆ ಅಪಾರ ಹಾನಿಯಾಗಿದ್ದು, ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು ಎಂದು ತಾಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನಿರ್ದೇಶಕ ಮಲ್ಲಿಕಾರ್ಜುನ ಕೊಡದೂರ ಒತ್ತಾಯಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪಂಚ ಪೂರ ಕುಗ್ರಾಮಗಳೆಂದೇ ಪರಿಗಣಿಸಲ್ಪಟ್ಟಿರುವ ಗ್ರಾಮದಲ್ಲಿ ರಸ್ತೆಗಳು ಸೇತುವೆಗಳು ಮತ್ತು ರೈತರು ಬೆಳೆದ ಮುಂಗಾರು ಬೆಳೆಗಳಾದ ತೊಗರಿ, ಉದ್ದು, ಹೆಸರು, ಸೋಯಾ ಇನ್ನಿತರ ಬೆಳೆಗಳು ನೀರು ಪಾಲಾಗಿವೆ. ನಿಡಗುಂದಾದ ರುದನೂರ ರಸ್ತೆ ಪ್ರಗತಿಯಲ್ಲಿರುವಾಗಲೇ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ 1.40ಕೋಟಿ ರೂ. ವ್ಯರ್ಥವಾಗಿದೆ ಎಂದು ವಿವರಿಸಿದರು.

ಭೂತಪೂರ, ಚಿಂತ್ರಪೂರ, ಚಿಂತ್ರಪಳ್ಳಿ, ರೈಕ್ವಾರ್‌ ಗ್ರಾಮಗಳಲ್ಲಿ ರೈತರು ಸಾಕಷ್ಟು ಪ್ರಮಾಣದಲ್ಲಿ ಹೆಸರು, ಉದ್ದು ಬೆಳೆಯುತ್ತಾರೆ. ಇದರಲ್ಲಿ ಮಳೆ ನೀರು ನಿಂತು ಬೆಳೆ ಸಂಪೂರ್ಣವಾಗಿ ಕೊಳೆಯುತ್ತಿದೆ. ಸೇಡಂ ವಿಧಾನಸಭೆ ಕ್ಷೇತ್ರದ ನಿಡಗುಂದಾ, ಖರ್ಚಖೇಡ ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದರಿಂದ ರಸ್ತೆಗಳಲ್ಲಿ ವಾಹನಗಳು ಸಂಚರಿಸುವುದು ಕಷ್ಟಕರವಾಗಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟವರು ಜಂಟಿ ಸಮೀಕ್ಷೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next