Advertisement

ಬಟನ್ ಒತ್ತಿ PAY ಮಾಡಿ

08:44 AM Jul 30, 2019 | keerthan |

ಹಾಪ್‌ಕಾಮ್ಸ್‌ಗೆ ಹೋಗಿ ತರಕಾರಿ ಕೊಂಡೆ. ಹಣ ನೀಡಲು ಜೇಬಿಗೆ ಕೈಹಾಕಿದಾಗ ಹತ್ತಿಪ್ಪತ್ತರ ಎರಡು ನೋಟು ಮಾತ್ರ ಇದ್ದವು. ಆತನಿಗೆ 73 ರೂ. ಕೊಡಬೇಕಿತ್ತು. ಜೇಬಿಗೆ ಕೈ ಹಾಕಿ ಪರದಾಡುತ್ತಿದ್ದ ನನ್ನನ್ನು ಗಮನಿಸಿದ ಅಂಗಡಿಯಾತ ಪರಿಚಯದ ಯುವಕ. ‘ಪರವಾಗಿಲ್ಲ ನಾಳೆ ಕೊಡಿ ಸಾರ್‌’ ಎಂದ. ‘ನಿನ್ನ ಬಳಿ ಗೂಗಲ್ಪೇ ಇದೆಯಾ’ ಎಂದು ಕೇಳಿದೆ. ಗೂಗಲ್ಪೇ ಇದೆ ಸಾರ್‌ ಎಂದ. ಆತನ ಮೊಬೈಲ್ ನಂ. ನನ್ನ ಮೊಬೈಲ್ನಲ್ಲಿತ್ತು. ಗೂಗಲ್ಪೇ ಗೆ ಹೋಗಿ, ಆತನ ಹೆಸರು ಆಯ್ಕೆ ಮಾಡಿಕೊಂಡು 73 ರೂ. ವರ್ಗಾವಣೆ ಮಾಡಿದೆ. ತಕ್ಷಣ 73 ರೂ. ಕ್ರೆಡಿಟ್ ಆಗಿರುವ ಸಂದೇಶ ಆತನ ಮೊಬೈಲ್ಗೆ ಬಂತು. ‘ಓಕೆ ಸರ್‌’ ಎಂದು ಆತ ಕಿರುನಗೆ ಬೀರಿದ!

Advertisement

ಇದೊಂದೇ ಅಲ್ಲ, ತಿಂಗಳ ಅಂಗಡಿ ಸಾಮಾನು, ವಿದ್ಯುತ್‌ ಬಿಲ್, ಮನೆ ಬಾಡಿಗೆಯನ್ನು ಫೋನ್‌ಪೇ ಅಥವಾ ಗೂಗಲ್ಪೇ ಮೂಲಕ ಕಳುಹಿಸಿಬಿಡುತ್ತೇನೆ. ಮನೆಗೆ ನಂದಿನಿ ಹಾಲು ಪೂರೈಸುವ ಯುವಕನ ಹತ್ತಿರವೂ ಫೋನ್‌ ಪೇ ಇತ್ತು. ಸಮಸ್ಯೆಯೇ ಇಲ್ಲ. 1ನೇ ತಾರೀಕು ಫೋನ್‌ಪೇ ಮೂಲಕ ಹಾಲಿನ ಹಣ ವರ್ಗಾವಣೆಯಾಗುತ್ತದೆ.

ಹೀಗೆ ಮಾಡುವುದರಿಂದ ನಮಗೆ ಆಯಾ ತಿಂಗಳು ಮಾಡಿದ ಖರ್ಚಿನ ಲೆಕ್ಕ ಸಿಗುತ್ತದೆ. ನೀವು ಯಾವತ್ತು ಕೊಟ್ಟಿರಿ? ಯಾವಾಗ ಕೊಟ್ಟಿರಿ? ಎಂಬ ಪ್ರಶ್ನೆಗಳಿರುವುದಿಲ್ಲ. ರಸೀದಿಗಳನ್ನು ಎತ್ತಿಟ್ಟುಕೊಳ್ಳುವ ಗೋಜಿಲ್ಲ. ಚಿಲ್ಲರೆ ಸಮಸ್ಯೆ ನೀಗುತ್ತದೆ. ಎಟಿಎಂಗಳಿಗೆ ಅಲೆಯುವುದು ತಪ್ಪುತ್ತದೆ. ಬಿಲ್ ಕಟ್ಟಲು ಕ್ಯೂ ನಲ್ಲಿ ನಿಲ್ಲುವ ರಗಳೆ ಇರುವುದಿಲ್ಲ.

ಮೊಬೈಲ್ ಫೋನ್‌ ಎಂಬ ಮಾಯಾವಿ ಬಂದ ಬಳಿಕ, ಒಳಿತು ಕೆಡುಕು ಎರಡೂ ಆಗುತ್ತಿವೆ! ವಾಟ್ಸಪ್‌, ಫೇಸ್‌ಬುಕ್‌ ಮೂಲಕ ಸಮಯವನ್ನು ತಿನ್ನುವ ಈ ಮೊಬೈಲ್ ಫೋನನ್ನು ನಮ್ಮ ಅಡಿಯಾಳಾಗಿ ಇಟ್ಟುಕೊಂಡರೆ ಹೆಚ್ಚು ಪ್ರಯೋಜನ ಪಡೆಯಬಹುದು!

ಬೆಂಗಳೂರು, ಮುಂಬಯಿಯಂಥ ಮಹಾನಗರಗಳಲ್ಲಿರುವವರಿಗೆ ಫೋನ್‌ಪೇ, ಗೂಗಲ್ಪೇ ಇತ್ಯಾದಿಗಳ ಬಳಕೆ ಸರ್ವೇ ಸಾಮಾನ್ಯವಾಗಿರುತ್ತದೆ. ಆದರೆ ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾವೇರಿ, ಕೊಪ್ಪಳ, ಶಿಡ್ಲಘಟ್ಟ, ನಂಜನಗೂಡು ಇಂಥ ಸಣ್ಣ ಪಟ್ಟಣಗಳಲ್ಲಿ ಇವುಗಳ ಬಳಕೆ ಹೆಚ್ಚಿಲ್ಲ. ಜನರು ಇವುಗಳ ಬಳಕೆಯನ್ನು ಅಭ್ಯಾಸ ಮಾಡಿಕೊಂಡರೆ ಅವರ ಹಣಕಾಸಿನ ವ್ಯವಹಾರ ಬಹಳ ಸುಲಭವಾಗುತ್ತದೆ. ಮೊಬೈಲೊಂದು ನಿಮ್ಮ ಕೈಯಲ್ಲಿದ್ದರೆ ಜೇಬಲ್ಲಿ ನಗದು, ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌ನ ಅಗತ್ಯ ಬೀಳುವುದಿಲ್ಲ.

Advertisement

ಗೂಗಲ್ಪೇ, ಫೋನ್‌ಪೇ ಯಂಥ ಆ್ಯಪ್‌ ಬಳಸಿದರೆ ನಮ್ಮ ಅಕೌಂಟಿನಿಂದ ಯಾರಾದರೂ ಹಣ ಎಗರಿಸಿಬಿಟ್ಟರೆ ಎಂಬ ಆತಂಕಗಳಿರುತ್ತವೆ. ಆದರೆ, ಕೇಂದ್ರ ಸರ್ಕಾರ ಪರಿಚಯಿಸಿರುವ ಯುಪಿಐ (ಯೂನಿಫೈಡ್‌ ಪೇಮೆಂಟ್ ಇಂಟರ್‌ಫೇಸ್‌) ವ್ಯವಸ್ಥೆ ಬಹಳ ಸುರಕ್ಷಿತವಾಗಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್‌ ಆಫ್ ಇಂಡಿಯಾ (ಇನ್‌ಪಿಸಿಐ) ಇದನ್ನು ಅಭಿವೃದ್ಧಿಪಡಿಸಿದೆ. ಯಾವುದೇ ಸಂಶಯವಿಲ್ಲದೇ ಮೊಬೈಲ್ನಲ್ಲಿ ಇದನ್ನು ಬಳಸಬಹುದು. ಈ ಯುಪಿಐ ಅನ್ನೇ ಆಧರಿಸಿ ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಗಳು ತಮ್ಮ ಆ್ಯಪ್‌ ಅನ್ನು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಉತ್ತಮವಾಗಿ ಅಭಿವೃದ್ಧಿಪಡಿಸಿವೆ.

ಗೂಗಲ್ಪೇ ಬಳಕೆ ಹೇಗೆ?
ಮೊಬೈಲ್ನಲ್ಲಿ ಗೂಗಲ್ ಪೇ ಬಳಸುವುದು ಹೇಗೆ ಎಂಬುದನ್ನು ಹಂತ ಹಂತವಾಗಿ ತಿಳಿಯೋಣ. ಮೊದಲಿಗೆ ನಿಮ್ಮ ಬ್ಯಾಂಕ್‌ನಲ್ಲಿ ನಿಮ್ಮ ಮೊಬೈಲ್ ನಂಬರನ್ನು ಮೊಬೈಲ್ ಬ್ಯಾಂಕ್‌ ಸೇವೆಗಾಗಿ ರಿಜಿಸ್ಟರ್‌ ಮಾಡಿಸಿರಬೇಕು. ನೀವು ಬ್ಯಾಂಕಿಗೆ ನೀಡಿರುವ ಮೊಬೈಲ್ ಸಂಖ್ಯೆಯ ಸಿಮ್‌ ಕಡ್ಡಾಯವಾಗಿ ಅದೇ ಫೋನಿನಲ್ಲಿರಬೇಕು. ಆ ಸಿಮ್‌ ಆಧಾರದ ಮೇಲೆಯೇ ಈ ಆ್ಯಪ್‌ ಕೆಲಸ ಮಾಡುವುದು. ಬಳಿಕ ಮೊಬೈಲ್ನಲ್ಲಿ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ, ಅಲ್ಲಿ ಗೂಗಲ್ ಪೇ ಅಥವಾ ಫೋನ್‌ಪೇ ಯನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಬಳಿಕ, ಮೊದಲಿಗೆ ಅದು ನೀವು ನಿಮ್ಮ ಬ್ಯಾಂಕ್‌ಗೆ ನೀಡಿರುವ 10 ಅಂಕಿಗಳ ಮೊಬೈಲ್ ಸಂಖ್ಯೆ ಕೇಳುತ್ತದೆ. ಅದನ್ನು ನಮೂದಿಸಿ, (ಅದೇ ನಂ. ನಿಮ್ಮ ಮೊಬೈಲ್ನಲ್ಲಿ ಇರಬೇಕು). ನಂತರ ನಿಮ್ಮ ಹೆಸರು ನಮೂದಿಸಿ, ಬಳಿಕ ಒನ್‌ ಟೈಮ್‌ ಪಾಸ್ವರ್ಡ್‌ ಬರುತ್ತದೆ. ಅದನ್ನು ಅದೇ ತೆಗೆದುಕೊಂಡು ನಮೂದಿಸಿಕೊಂಡು ಮುಂದುವರೆಯುತ್ತದೆ. ನಂತರದ ಹಂತದಲ್ಲಿ ನಿಮ್ಮ ಮೊಬೈಲ್ನಲ್ಲಿ ಬೆರಳಚ್ಚು ಸ್ಕ್ಯಾನರ್‌ ಅಥವಾ ನಾಲ್ಕು ಅಂಕೆಯ ಪಿನ್‌ ಕೇಳುತ್ತದೆ. ನಿಮಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ. ಪಿನ್‌ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಬಳಿಕ ನಾಲ್ಕು ಅಂಕಿಯ ಪಿನ್‌ ಅನ್ನು ಎರಡು ಬಾರಿ ಒತ್ತಬೇಕು. ಬಳಿಕ ಕೆಲವು ಅನುಮತಿಗಳನ್ನು ಕೇಳುತ್ತದೆ. ಅದಕ್ಕೆಲ್ಲ ಒಪ್ಪಿಗೆ ಒತ್ತಿ. ಬಳಿಕ ನಿಮ್ಮ ಬ್ಯಾಂಕ್‌ ಯಾವುದಿದೆ ಅದನ್ನು ಲಿಸ್ಟ್‌ನಲ್ಲಿ ಹುಡುಕಿ ಆಯ್ಕೆ ಮಾಡಿ, ಆಗ ನಿಮ್ಮ ಅಕೌಂಟನ್ನು ಅದೇ ತೋರಿಸುತ್ತದೆ. ಅಲ್ಲಿ ಆ ಬ್ಯಾಂಕಿನ ನಿಮ್ಮ ಡೆಬಿಟ್ ಕಾರ್ಡಿನ ಕೊನೆಯ ಆರು ಅಂಕಿ, ಮತ್ತು ವಾಯಿದೆಯ ತಿಂಗಳು ಹಾಗೂ ವರ್ಷವನ್ನು ನಮೂದಿಸಬೇಕು. ಬಳಿಕ ನೀವು ಬ್ಯಾಂಕಿನ ವ್ಯವಹಾರಕ್ಕೆ ಬಳಸಲು ಇನ್ನೊಂದು ಪಿನ್‌ ಸೃಷ್ಟಿಸಬೇಕು. ಗಮನಿಸಿ, ಮೊದಲು ಹೇಳಿದ ಪಿನ್‌, ನಿಮ್ಮ ಆ್ಯಪ್‌ ಅನ್ನು ತೆರೆಯಲು, ಈಗಿನ ಪಿನ್‌, ನೀವು ಪ್ರತಿ ಬಾರಿ ಪಾವತಿ ಮಾಡುವಾಗ ನಮೂದಿಸುವ ಪಿನ್‌. ಎರಡೂ ಪಿನ್‌ ಒಂದೇ ಇದ್ದರೆ ಗೊಂದಲವಿರುವುದಿಲ್ಲ. ಹಾಗಾಗಿ, ಮೊದಲು ನಮೂದಿಸಿದ ಪಿನ್‌ ಅನ್ನೇ ಇಲ್ಲೂ ನಮೂದಿಸಿಕೊಂಡರೆ ಒಳ್ಳೆಯದು. ಈಗ ನಿಮ್ಮ ಗೂಗಲ್ ಪೇ ಬಳಕೆಗೆ ಸಿದ್ಧ!

ಬೇರೆಯವರಿಗೆ ಹಣ ಕಳುಹಿಸುವುದು ಹೇಗೆ?
ಗೂಗಲ್ ಪೇ ಹಾಗೂ ಫೋನ್‌ಪೇ ಮೂಲಕ ಬೇರೆಯವರಿಗೆ ಹಣ ಕಳುಹಿಸಲು ಮೂರ್ನಾಲ್ಕು ವಿಧಾನಗಳಿವೆ. ಬೇರೆಯವರ ಬ್ಯಾಂಕ್‌ ಅಕೌಂಟಿಗೆ, ಅವರ ಮೊಬೈಲ್ ಸಂಖ್ಯೆಗೆ, ಅಥವಾ ಅವರ ಭೀಮ್‌ ಯುಪಿ ಐಡಿಗೆ ಹಣ ವರ್ಗಾವಣೆ ಮಾಡಬಹುದು. ನಿಮ್ಮಂತೆ ಅವರೂ ಗೂಗಲ್ಪೇ ಇನ್‌ಸ್ಟಾಲ್ ಮಾಡಿಕೊಂಡಿದ್ದರೆ ಅವರ ಹೆಸರು ಮೊಬೈಲ್ ನಂ. ತೋರಿಸುತ್ತದೆ. ಅದನ್ನು ಆಯ್ಕೆ ಮಾಡಿಕೊಂಡು ಹಣದ ಮೌಲ್ಯ ನಮೂದಿಸಿ, ಕಳುಹಿಸಬಹುದು. ಅಥವಾ ಹಣ ಸ್ವೀಕರಿಸುವವರ ಬ್ಯಾಂಕ್‌ ಸಂಖ್ಯೆ ಐಎಫ್ಎಸ್‌ಸಿ ಕೋಡ್‌ ಒತ್ತಿ ಅದಕ್ಕೂ ಹಣ ಕಳುಹಿಸಬಹುದು.

ಇನ್ನು ಪ್ರಾವಿಷನ್‌ ಸ್ಟೋರ್‌, ಪೆಟ್ರೋಲ್ ಬಂಕ್‌ನಂಥ ಸ್ಥಳಗಳಿಗೆ ಹೋದಾಗ ಅಲ್ಲಿ ಇಟ್ಟಿರುವ ಕ್ಯೂಆರ್‌ ಕೋಡ್‌ ಮೇಲೆ, ನಿಮ್ಮ ಗೂಗಲ್ಪೇಗೆ ಹೋಗಿ ಸ್ಕ್ಯಾನ್‌ ಕ್ಯೂಆರ್‌ ಕೋಡ್‌ ಆಯ್ಕೆ ಮಾಡಿಕೊಂಡು ಅದರ ಮೇಲೆ ಹಿಡಿದರೆ, ಅವರ ವಿವರ ಬರುತ್ತದೆ. ಅಲ್ಲಿ ಹಣದ ಮೌಲ್ಯ ನಮೂದಿಸಿ ಎಂಟರ್‌ ಕೊಟ್ಟರೆ ಆಯಿತು!

ಅಂಗಡಿಯವರು ಯಾವುದೇ ಕ್ಯೂ ಆರ್‌ ಕೋಡ್‌ ಪಡೆಯದಿದ್ದರೂ ಚಿಂತಿಸಬೇಕಾಗಿಲ್ಲ. ಅವರ ಫೋನ್‌ಪೇ ಅಥವಾ ಗೂಗಲ್ಪೇಯಲ್ಲಿರುವ ಕ್ಯೂಆರ್‌ ಕೋಡನ್ನು ಗ್ರಾಹಕರಿಗೆ ಮೊಬೈಲ್ನಲ್ಲೇ ತೋರಿಸಿದರೆ, ಗ್ರಾಹಕರು ತಮ್ಮ ಮೊಬೈಲಿನಿಂದ ಸ್ಕ್ಯಾನ್‌ ಮಾಡಿ ಹಣ ಕಳುಹಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next