Advertisement

ಉತ್ತರಕ್ಕಾಗಿ ಒಂದನ್ನು ಒತ್ತಿ

11:22 AM Jul 07, 2018 | Team Udayavani |

“ಏ ನೀನ್‌ ಚಂದ್ರ ಅಲ್ವೇನ್ಲಾ …’
“ಹೌದು, ನೀವ್ಯಾರು ಗೊತ್ತಾಗ್ಲಿಲ್ಲ …’
“ನನ್ನೇ ಮರೆತುಬಿಟ್ಟೇನ್ಲಾ, ನಾನು ನಿನ್‌ ಚಡ್ಡಿ ದೋಸ್ತ್ ಅವಿನಾಶ …’
“ಓ ನೀನೇನ್ಲಾ, ಗಡ್ಡ ಬುಟುºಟ್ಟಿ ಇಂಗ್‌ ಆಗ್ಬಿಟ್ಟಿದ್ದೀಯ? ಗುರತೇ ಸಿಕ್ಕಾಕಿಲ್ವಲ್ಲ …’
ಹೀಗೆ ಅದೆಷ್ಟೋ ವರ್ಷಗಳ ನಂತರ ಅವರಿಬ್ಬರು ಅದೊಂದು ದಿನ ಭೇಟಿಯಾಗುತ್ತಾರೆ. ಭೇಟಿಯಾದ ಸಂತೋಷದಲ್ಲಿ ಇಬ್ಬರೂ ಒಂದು ಲಾಂಗ್‌ ರೌಂಡು ಹೋಗೋಣ ಅಂತ ತೀರ್ಮಾನಿಸಿ, ಹಳೆಯ ಪ್ರೀಮಿಯರ್‌ ಪದ್ಮಿನಿ ಹತ್ತುತ್ತಾರೆ. ಎಲ್ಲಿಗೆ ಹೋಗಬೇಕು ಇಬ್ಬರಿಗೂ ಗೊತ್ತಾಗುವುದಿಲ್ಲ. ಬೋರ್‌ ಆಗುವವರೆಗೂ ಹೋಗಿ, ಹಿಂದಕ್ಕೆ ಬಂದರಾಯಿತು ಅಂತ ಮಾತಾಡಿಕೊಂಡು ಹೊರಡುತ್ತಾರೆ. ಹಾಗೆ ಹೋದವರಿಗೆ, ಮರುದಿನ ತಮ್ಮ ಬದುಕೇ ಬದಲಾಗಬಹುದು ಎಂದು ಗೊತ್ತಿರುವುದಿಲ್ಲ.

Advertisement

“ಕನ್ನಡಕ್ಕಾಗಿ ಒಂದನ್ನು ಒತ್ತಿ’ ಒಂದು ಅಪ್ಪಟ ಪ್ರೇಮಕಥೆಯ ಚಿತ್ರ. ಒಂದು ಎನ್ನುವುದಕ್ಕಿಂತ ಎರಡು ಪ್ರೇಮಕಥೆಗಳು ಎನ್ನಬಹುದು. ಒಂದು ಅವಿನಾಶನದು. ಇನ್ನೊಂದು ಚಂದ್ರನದು. ಲಾಂಗ್‌ ರೌಂಡ್‌ಗೆಂದು ಹೋಗುವ ಸಂದರ್ಭದಲ್ಲಿ ದಾರಿ ಮಧ್ಯೆ ಏನಾದರೂ ಮಾತಾಡಬೇಕಲ್ಲ. ಅವಿನಾಶ ತನ್ನನ್ನು ಪ್ರೀತಿಸಿ ಮಾಯವಾದ ಹುಡುಗಿಯ ಕಥೆ ಹೇಳುತ್ತಾನೆ. ಅಲ್ಲಿಗೆ ಮೊದಲಾರ್ಧ ಮುಗಿಯುತ್ತದೆ.

ದ್ವಿತೀಯಾರ್ಧದಲ್ಲಿ ಚಂದ್ರ ತಾನು ಹೈಸ್ಕೂಲ್‌ನಲ್ಲಿ ಇಷ್ಟಪಟ್ಟ ಹುಡುಗಿಯ ಬಗ್ಗೆ ಹೇಳುತ್ತಾನೆ. ಪ್ರೀತಿ ನಿವೇದನೆಗೆ ಮುಂಚೆಯೇ ಆ ಹುಡುಗಿ ತನ್ನನ್ನೂ, ಊರನ್ನು ಬಿಟ್ಟು ಹೋಗಿದ್ದಕ್ಕೆ ಕಣ್ಣೀರು ಹಾಕುತ್ತಾನೆ. ಎರಡೂ ಬೇರೆಬೇರೆ ಪ್ರೇಮಕಥೆಗಳದಾರೂ ವಿಚಿತ್ರ ಎಂದರೆ ಈ ಎರಡೂ ಪ್ರೇಮಕಥೆಗಳಿಗೆ ಒಂದು ಕಾಮನ್‌ ಆದಂತಹ ಅಂಶವಿದೆ. ಅದೇನು ಅಂತ ಕುತೂಹಲವಿದ್ದರೆ ಚಿತ್ರ ನೋಡಬೇಕು.

ಚಿತ್ರದ ದೊಡ್ಡ ಸಮಸ್ಯೆಯೆಂದರೆ ಅದರ ಉದ್ದ. ಚಿತ್ರ ಸ್ವಲ್ಪ ಜಾಸ್ತಿಯೇ ಉದ್ದವಿದೆ ಮತ್ತು ಅಷ್ಟೆಲ್ಲಾ ಚಿತ್ರಕ್ಕೆ ಅವಶ್ಯಕವಿರಲಿಲ್ಲ. ಈ ಎರಡೂ ಪ್ರೇಮಕಥೆಗಳೇ ಚಿತ್ರದ ಸಾಕಷ್ಟು ಭಾಗ ತಿನ್ನುತ್ತದೆ ಮತ್ತು ಅದು ಮುಗಿದ ಮೇಲೆ ಚಿತ್ರಕ್ಕೊಂದು ತಿರುವು ಸಿಗುತ್ತದೆ. ಹೇಳಿದ್ದನ್ನೇ ಹೇಳಿ, ಸಮಯ ಹಾಳು ಮಾಡುವ ಬದಲು ಎರಡೂ ಪ್ರೇಮಕಥೆಗಳಿಗೆ ಕತ್ತರಿ ಆಡಿಸಿ, ಇನ್ನಷ್ಟು ವೇಗವಾಗಿ ನಿರೂಪಿಸುವ ಸಾಧ್ಯತೆ ಮತ್ತು ಅವಕಾಶ ಎರಡೂ ಇತ್ತು.

ಆದರೆ, ನಿರ್ದೇಶಕ ಕುಶಾಲ್‌ ಇಂಥದ್ದೊಂದು ಅವಕಾಶವನ್ನು ಕೈಚೆಲ್ಲಿದ್ದಾರೆ. ಪ್ರಮುಖವಾಗಿ ಚಿಕ್ಕಣ್ಣ ಅವರ ಶಾಲೆಯ ಎಪಿಸೋಡ್‌ ಕೆಲವೊಮ್ಮೆ ಸಹನೆ ಪರೀಕ್ಷಿಸುತ್ತದೆ. ಬಹುಶಃ ಚಿತ್ರ ಇನ್ನಷ್ಟು ಚುರುಕಾಗಿದ್ದರೆ, ಪ್ರೇಕ್ಷಕರ ಮನಮುಟ್ಟುತಿತ್ತೋ ಏನೋ? ಎಳೆದಾಟ ಜಾಸ್ತಿಯಾದ್ದರಿಂದಲೇ ಒಂದಿಷ್ಟು ಒಳ್ಳೆಯ ಅಂಶಗಳು ಮನಸ್ಸಿನಲ್ಲಿ ಕೂರುವುದಿಲ್ಲ.

Advertisement

ಪ್ರಮುಖವಾಗಿ ರಿಷಿಕೇಶ್‌ ಅವರ ಛಾಯಾಗ್ರಹಣ, ಅರ್ಜುನ್‌ ಜನ್ಯ ಸಂಯೋಜಿಸಿರುವ ಹಾಡುಗಳು, ಪ್ರಧಾನ ಕಲಾವಿದರ ಅಭಿನಯ ಎಲ್ಲವೂ ಸೈಲೆಂಟ್‌ ಆಗಿ ಸೈಡ್‌ನ‌ಲ್ಲಿದ್ದು ಬಿಡುತ್ತದೆ. ದ್ವಿತೀಯಾರ್ಧದಲ್ಲಿ ಚಿತ್ರವು ಮತ್ತೆ ಟೇಕಾಫ್ ಆಗುತ್ತದಾದರೂ, ಕೊನೆಗೆ ಇನ್ನೇನೋ ಆಗುತ್ತದೆ. ಇದೆಲ್ಲದರ ಮಧ್ಯೆ ಪ್ರೇಕ್ಷಕರಲ್ಲಿ ಉಳಿಯುವ ಕಟ್ಟಕಡೆಯ ಪ್ರಶ್ನೆ, ಚಿತ್ರಕ್ಕೂ, ಶೀರ್ಷಿಕೆಗೂ ಏನು ಸಂಬಂಧ ಎಂಬುದು? ಉತ್ತರ ಗೊತ್ತಾಗಬೇಕಾದರೆ ಒಂದನ್ನು ಒತ್ತಬಹುದು.

ಚಿತ್ರ: ಕನ್ನಡಕ್ಕಾಗಿ ಒಂದನ್ನು ಒತ್ತಿ
ನಿರ್ದೇಶನ: ಕುಶಾಲ್‌
ನಿರ್ಮಾಣ: ಎಡಬಿಡಂಗಿ ಟಾಕೀಸ್‌
ತಾರಾಗಣ: ಅವಿನಾಶ್‌, ಚಿಕ್ಕಣ್ಣ, ಕೃಷಿ ತಪಂಡ, ಸುಚೇಂದ್ರ ಪ್ರಸಾದ್‌, ದತ್ತಣ್ಣ , ಮಿಮಿಕ್ರಿ ಗೋಪಿ ಮುಂತಾದವರು

* ಚೇತನ್‌ ನಾಡಿಗೇರ್

Advertisement

Udayavani is now on Telegram. Click here to join our channel and stay updated with the latest news.

Next