ಬೆಂಗಳೂರು: ನಿತ್ಯ ಗಾಳಿ, ಚಳಿ, ಮಳೆಯನ್ನು ಲೆಕ್ಕಿಸದೆ ಮನೆ ಮನೆಗೂ ಪತ್ರಿಕೆಗಳನ್ನು ಹಾಕುವವರು ಜನರ ಕಣ್ಣಿಗೆ ಕಾಣದ ಹೀರೋಗಳು ಎಂದು ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದ ಸ್ವಾಮೀಜಿ ಶ್ಲಾಘಿಸಿದರು.
ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ವಿಶ್ವಪತ್ರಿಕಾ ವಿತರಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕಾ ವಿತರಕರಿಗೆ ನಿರ್ದಿಷ್ಟ ವಯೋಮಿತಿಯಿಲ್ಲ. ಚಿಕ್ಕ ಮಕ್ಕಳಿಂದ ವೃದ್ಧರವರೆಗೂ ಈ ವೃತ್ತಿಯನ್ನು ನಿರ್ವಹಿಸುವವರಿದ್ದಾರೆ ಎಂದರು.
ರಾಜ್ಯದಲ್ಲಿರುವ 70 ಸಾವಿರ ಪತ್ರಿಕಾ ವಿತರಕರು ಮುಂದಿನ ದಿನಗಳಲ್ಲಿ ಒಂದೆಡೆ ಸೇರಿ ದೊಡ್ಡಮಟ್ಟ ದಲ್ಲಿ ವಿತರಕರ ಹಬ್ಬವನ್ನು ಆಚರಿಸು ವಂತಾಗಬೇಕು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ| ಪಿ.ಎಸ್. ಹರ್ಷ ಮಾತನಾಡಿ, ಸರಕಾರದ ನಿಟ್ಟಿನಲ್ಲಿ “ದತ್ತಿನಿಧಿ’ ಮಾಡುವಯೋಜನೆಗಳು ನಡೆದವು. ಆದರೆಇದುವರೆಗೆ ಯಾವುದೇ ಇಲಾಖೆಯಿಂದ ಹಣ ಬಿಡುಗಡೆ ಆಗಿಲ್ಲ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಮಿಕ ಇಲಾಖೆ ಇ-ಶ್ರಮ್ ವ್ಯವಸ್ಥೆ ಕಲ್ಪಿಸಿ ಕೊಟ್ಟಿದ್ದು, ಇದರಲ್ಲಿರುವ ಅವ್ಯವಸ್ಥೆಯನ್ನು ಸದ್ಯದಲ್ಲೇ ಸರಿಪಡಿಸಲಾಗುವುದು. ನಿಮ್ಮ ಬೇಡಿಕೆಗಳನ್ನು ಸರಕಾರಕ್ಕೆ ತಿಳಿಸಲಾಗುವುದು ಎಂದರು.
ಇದೇ ವೇಳೆ ಹಿರಿಯ ಪತ್ರಿಕಾ ವಿತರಕರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಹಿರಿಯ ಪತ್ರಕರ್ತ ರವಿ ಹೆಗಡೆ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಒಕ್ಕೂಟದ ಗೌರವ ಸಲಹೆಗಾರ ಶಿವಾನಂದ ತಗಡೂರು, ಒಕ್ಕೂಟದ ರಾಜ್ಯಾಧ್ಯಕ್ಷ ಕೆ. ಶಂಭುಲಿಂಗ, ಕಸಾಪ ಅಧ್ಯಕ್ಷ ಡಾ| ಮಹೇಶ್ ಜೋಷಿ ಮುಂತಾದ ಪ್ರಮುಖರು ಹಾಗೂ ಅಪಾರ ಸಂಖ್ಯೆಯಲ್ಲಿ ಪತ್ರಿಕಾ ವಿತರಕರು ಉಪಸ್ಥಿತರಿದ್ದರು.