ಮನೆಗಳಿಗೆ ದಿನಪತ್ರಿಕೆ ವಿತರಣೆ ನಿಲ್ಲಿಸಿದ್ದರ ವಿರುದ್ಧ ಕ್ರಮ
ದಿನಪತ್ರಿಕೆ ವಿತರಣೆ ನಿಲ್ಲಿಸುವಂತೆ ಶನಿವಾರ ಆದೇಶಿಸಿದ್ದ ಮಹಾರಾಷ್ಟ್ರ ಸರಕಾರ
ಹೊಸದಿಲ್ಲಿ: ದಿನಪತ್ರಿಕೆಗಳನ್ನು ಮನೆಗಳಿಗೆ ತಲುಪಿಸುವ ಸೇವೆಯನ್ನು ನಿರ್ಬಂಧಗೊಳಿಸಿರುವ ಮಹಾರಾಷ್ಟ್ರ ಸರಕಾರಕ್ಕೆ ಭಾರತೀಯ ಪ್ರಸ್ ಕೌನ್ಸಿಲ್ (ಪಿಸಿಐ), ನೋಟಿಸ್ ಜಾರಿಗೊಳಿಸಿದೆ. ಕೊರೊನಾ ವೈರಸ್ ಪ್ರಸರಣವನ್ನು ತಡೆಗಟ್ಟಲು ಮಹಾರಾಷ್ಟ್ರ ಸರಕಾರ ಶನಿವಾರ ಆದೇಶ ನೀಡಿತ್ತು.
ಮುದ್ರಣ ಮಾಧ್ಯಮ ಸಂಸ್ಥೆಗಳು ಪತ್ರಿಕೆಗಳನ್ನು ಮುದ್ರಿಸಬಹುದು. ಆದರೆ, ಅವುಗಳು ಪತ್ರಿಕೆ ಮಾರಾಟ ಅಂಗಡಿಗಳಲ್ಲಿ ಹಾಗೂ ಇತರೆಡೆ ಮಾತ್ರ ಮಾರಾಟವಾಗಬೇಕು. ಮನೆಗಳಿಗೆ ಪತ್ರಿಕೆಯನ್ನು ವಿತರಿಸುವಂತಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಡಿ ಶನಿವಾರ ಪ್ರಕಟನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪಿಸಿಐ ನೋಟಿಸ್ ಜಾರಿಗೊಳಿಸಿದೆ.
“ಮಹಾರಾಷ್ಟ್ರ ಸರಕಾರದ ಆದೇಶ, ಮಾ. 23ರಂದು ಕೇಂದ್ರ ಸರಕಾರ ನೀಡಿರುವ ಮಾರ್ಗ ಸೂಚಿಗಳಿಗೆ ವಿರುದ್ಧವಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖೀಸಲಾಗಿದೆ. ಈ ಕುರಿತಂತೆ ವಿವರಣೆ ನೀಡುವಂತೆ ಕೋರ ಲಾಗಿದೆ ಎಂದು ಪಿಸಿಐ, ನೋಟಿಸ್ ನೀಡಿರುವ ಬಗ್ಗೆ ನೀಡಲಾಗಿರುವ ಪ್ರಕಟನೆಯಲ್ಲಿ ಹೇಳಿದೆ.
ಮಾ. 25ರಂದು ಕೇಂದ್ರ ಸರಕಾರ ಎಲ್ಲಾ ರಾಜ್ಯ ಸರಕಾರಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದ್ದ ಮಾರ್ಗಸೂಚಿಯಲ್ಲಿ ದಿನಪತ್ರಿಕೆಗಳ ವಿತರಣೆಗೆ ಲಾಕ್‌ಡೌನ್ ನಿಯಮಗಳು ಅನ್ವಯಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.