ನವದೆಹಲಿ: ದೆಹಲಿಯಲ್ಲಿರುವ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ (ಎನ್‌ಎಂಎಂಎಲ್) ಮರುನಾಮಕರಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ. ಇದನ್ನು ಈಗ ಅಧಿಕೃತವಾಗಿ ಪ್ರಧಾನ ಮಂತ್ರಿಗಳ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ ಎಂದು ಕರೆಯಲಾಗುವುದು ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಜೂನ್ ನಲ್ಲಿ ನಡೆದ NMML ಸೊಸೈಟಿಯ ವಿಶೇಷ ಸಭೆಯಲ್ಲಿ, ಸಂಸ್ಥೆಯ ಹೆಸರನ್ನು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಬದಲಾಯಿಸಲು ನಿರ್ಧರಿಸಲಾಯಿತು. ಸೊಸೈಟಿಯ ಉಪಾಧ್ಯಕ್ಷ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಹೊಸ ಹೆಸರಿನ ಮೇಲೆ ಅಂತಿಮವಾಗಿ ಅಧಿಕೃತ ಮುದ್ರೆ ಹಾಕಲು ಕೆಲವು ಆಡಳಿತಾತ್ಮಕ ಪ್ರಕ್ರಿಯೆಗಳ ಅಗತ್ಯವಿದೆ ಎಂದು ಮೂಲಗಳು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿವೆ. ಭಾರತದ 77 ನೇ ಸ್ವಾತಂತ್ರ್ಯ ದಿನದಂದು ಈ ಹೆಸರನ್ನು ಅಧಿಕೃತಗೊಳಿಸಲಾಯಿತು. ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಲೈಬ್ರರಿಯ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರು ಈ ಹಿಂದೆ ಟ್ವಿಟರ್ ‘X’ ನಲ್ಲಿ ಮರುನಾಮಕರಣದ ಕುರಿತು ಪೋಸ್ಟ್ ಮಾಡಿದ್ದರು.
ಈ ನಡುವೆ ಹೆಸರು ಬದಲಾವಣೆಯ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಬಿಜೆಪಿಯ ನಡೆಯನ್ನು ತೀವ್ರವಾಗಿ ಖಂಡಿಸಿತ್ತು. ಆದರೆ ಇದೀಗ ಮರುನಾಮಕರಣಕ್ಕೆ ರಾಷ್ಟ್ರಪತಿಗಳ ಅನುಮೋದನೆಯೂ ಸಿಕ್ಕಿದೆ.
ಇದನ್ನೂ ಓದಿ: Pakistan: ಆರ್ಥಿಕವಾಗಿ ದಿವಾಳಿಯಾದ ಪಾಕ್ ನಲ್ಲಿ 300 ರೂಪಾಯಿ ದಾಟಿದ ಪೆಟ್ರೋಲ್ ಬೆಲೆ!