ಮಾಗಡಿ: ಬಾಚೇನಹಟ್ಟಿ ಗ್ರಾಮ ಪಂಚಾಯ್ತಿಗೆ ನೂತನ ಅಧ್ಯಕ್ಷೆಯಾಗಿ ಮುನಿರತ್ನಮ್ಮ ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆಯ ಎಇಇ ರಾಮಣ್ಣ ಘೋಷಣೆ ಮಾಡಿದರು.
ಬಾಚೇನಹಟ್ಟಿ ಗ್ರಾಮ ಪಂಚಾಯ್ತಿ ಚುನಾವಣೆ ಕುತೂಹಲ ಕೆರಳಿಸಿತ್ತು. ಈ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸಬಹುದು ಎಂದು ಉಭಯ ಪಕ್ಷದ ಮುಖಂಡರು, ಗ್ರಾಮಸ್ಥರು ಪಂಚಾಯ್ತಿ ಮುಂದೆ ಜಮಾಯಿಸಿದ್ದರು. ಬಾಚೇನಹಟ್ಟಿ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 19 ಮಂದಿ ಸದಸ್ಯರಿದ್ದು, ಜೆಡಿಎಸ್ ಬೆಂಬಲಿತ 9 ಮಂದಿ ಮತ್ತು ಕಾಂಗ್ರೆಸ್ ಬೆಂಬಲಿತ 9 ಮಂದಿ ಸದಸ್ಯರಿದ್ದರು. ಒಬ್ಬ ಸದಸ್ಯ ಮಾತ್ರ ಗೈರಾಗಿದ್ದರಿಂದ ಉಭಯ ಪಕ್ಷದಿಂದ ತಲಾ 9 ಮಂದಿ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ ಕಾಂಗ್ರೆಸ್‌ನಿಂದ ಭಾನುಮತಿ ಮತ್ತು ಮುನಿರತ್ನಮ್ಮ ಇಬ್ಬರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಸ್ಪರ್ಧೆಗೆ ಮುನ್ನ ಆಕಾಂಕ್ಷಿಗಳು ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ಯಿದ್ದರು ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ ಮತ ಹಾಕಿಸಿಕೊಳ್ಳಲು ರಾಜಕೀಯ ತಂತ್ರಗಾರಿಕೆ ಸಹ ನಡೆಸಿ, ಮತ ಚಲಾವಣೆಗೆ ಮುನ್ನೆ ಪ್ರವಾಸದಿಂದ ನೇರವಾಗಿ ಪಂಚಾಯ್ತಿಗೆ ಆಗಮಿಸಿದ್ದರು.
ಕೈ ಎತ್ತುವ ಮೂಲಕ ಬೆಂಬಲ: ಅಧ್ಯಕ್ಷ ಸ್ಥಾನದ ಇಬ್ಬರು ಸ್ಪರ್ಧಿಗಳಿಗೆ ಸದಸ್ಯರು ಕೈ ಎತ್ತುವ ಮೂಲಕ ಸಮ ಮತದ ಬೆಂಬಲ ವ್ಯಕ್ತವಾಯಿತು. ಹೀಗಾಗಿ ಇಬ್ಬರ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಹೆಸರನ್ನು ಬರೆದು ಲಾಟರಿ ಹಾಕುವ ಮೂಲಕ ಅಧ್ಯಕ್ಷ ಸ್ಥಾನ ಪರೀಕ್ಷೆ ನಡೆಯಿತು. ಆಗ ಜೆಡಿಎಸ್ ಬೆಂಬಲಿತ ಮುನಿರತ್ನಮ್ಮ ಹೆಸರು ಬಂದ ಕಾರಣ ಮುನಿರತ್ನಮ್ಮ ಅವರನ್ನು ಅಧ್ಯಕ್ಷೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಉತ್ತಮ ಆಡಳಿತ ನಡೆಸುವ ಭರವದೆ: ಈ ವೇಳೆ ನೂತನ ಅಧ್ಯಕ್ಷೆ ಮುನಿರತ್ನಮ್ಮ ಮಾತನಾಡಿ, ತನಗೆ ಕೇವಲ ಒಂದು ವರ್ಷ ಅವಧಿ ಸಿಕ್ಕಿದೆ. ಈ ಅವಧಿಯಲ್ಲಿ ಯಾವುದೇ ಲೋಪವಾಗದೆ ಉತ್ತಮ ಆಡಳಿತ ನಡೆಸುತ್ತೇವೆ. ತನಗೆ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿದ್ದಾಗಿ ತಿಳಿಸಿದ ಅವರು, ಮೊದಲು ಸಾಮಾಜಿಕ ನ್ಯಾಯದಡಿ ಬಡವರಿಗೆ ವಸತಿ ಯೋಜನೆಯಡಿ ಮನೆ ನಿರ್ಮಿಸಲಾಗುವುದು. ಎಲ್ಲಾ ಗ್ರಾಮಗಳಿಗೂ ಸಮರ್ಪಕವಾಗಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಮಂಜುನಾಥ್, ಮರಿಯಪ್ಪ, ಮಂಜುಳಾ, ಶಶಿಕಲಾ, ಜಯಮ್ಮ, ರಂಗನರಸಿಂಹಯ್ಯ, ಮುನಿರತ್ನ, ಮುಖಂಡರಾದ ಮುದ್ದಹನುಮಯ್ಯ, ಬಿ.ಎಚ್.ಅಶೋಕ್, ರಾಮಣ್ಣ, ಸಿದ್ದಪ್ಪ, ಜಯರಾಮ, ಶಿವಕುಮಾರ್, ಪಿಡಿಒ ಕಾಂತರಾಜು, ಕಾರ್ಯದರ್ಶಿ ರಾಮಚಂದ್ರಯ್ಯ ಹಾಜರಿದ್ದರು.