ಬೆಂಗಳೂರು: ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ಇಂದು ನಡೆಯುತ್ತಿದೆ. ದೇಶದ ಪ್ರಥಮ ಪ್ರಜೆ ಹುದ್ದೆಗೆ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ವಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಸ್ಪರ್ಧಿಸಿದ್ದಾರೆ. ಹೊಸದಿಲ್ಲಿಯ ಸಂಸತ್ ಭವನದಲ್ಲಿ ಮತ್ತು ಆಯಾ ರಾಜ್ಯಗಳ ರಾಜಧಾನಿಗಳಲ್ಲಿ ಇಂದು ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಮತದಾನ ನಡೆಯಲಿದೆ.
ರಾಷ್ಟ್ರಪತಿ ಚುನಾವಣೆಗೆ ರಾಜ್ಯದಲ್ಲೂ ಸಿದ್ದತೆ ನಡೆದಿದೆ. ವಿಧಾನಸೌಧದ ಕೊಠಢಿ ಸಂಖ್ಯೆ 106ರಲ್ಲಿ ಮತದಾನ ನಡೆಯಲಿದೆ.
ರಾಜ್ಯದ ಬಿಜೆಪಿ ಶಾಸಕರು ಬೆಳಗ್ಗೆ 10 ಗಂಟೆಯ ನಂತರ ಮತದಾನ ನಡೆಸಲಿದ್ದಾರೆ. ಈ ಶಾಸಕರು ಶನಿವಾರ ಸಂಜೆಯಿಂದ ಖಾಸಗಿ ಹೋಟೆಲ್ ನಲ್ಲಿದ್ದು, ಮತದಾನಕ್ಕೆ ಖಾಸಗಿ ಹೋಟೆಲ್ ನಿಂದ ವಿಧಾನಸೌಧಕ್ಕೆ ತೆರಳಲಿದ್ದಾರೆ.
ಶಾಸಕರನ್ನು ಕರೆದುಕೊಂಡು ಹೋಗಲು ಬಿಎಂಟಿಸಿ ಬಸ್ ಸಿದ್ಧವಾಗಿದ್ದು, ಒಟ್ಟು ಮೂರು ಬಸ್ ನಲ್ಲಿ ಬಿಜೆಪಿ ಶಾಸಕರು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧಕ್ಕೆ ಪ್ರಯಾಣಿಸಲಿದ್ದಾರೆ.
ಇದನ್ನೂ ಓದಿ:ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ
ರಾಷ್ಟ್ರಪತಿ ಚುನಾವಣೆಗೆ ಮತದಾರರು ಆಗಿರುವ 224 ಶಾಸಕರ ಜತೆಗೆ ರಾಜ್ಯದ ಇಬ್ಬರು ಸಂಸದರು ವಿಧಾನಸೌಧದಲ್ಲಿಯೇ ಬೆಳಗ್ಗೆ 10ರಿಂದ ಸಂಜೆ 5ರ ನಡುವೆ ಮತ ಚಲಾಯಿಸಲಿದ್ದಾರೆ. ವಿಧಾನಸೌಧದಲ್ಲಿಯೇ ಮತ ಹಾಕಲಿರುವ ಸಂಸದರೆಂದರೆ ಚಾಮರಾಜನಗರದ ಸಂಸದ ವಿ. ಶ್ರೀನಿವಾಸ ಪ್ರಸಾದ್ ಮತ್ತು ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡರು.