ಯಳಂದೂರು: ತಾಲೂಕಿನ ಪ್ರಸಿದ್ಧ ಪೌರಾಣಿಕ ಕ್ಷೇತ್ರವಾದ ಬಿಳಿಗಿರಿ ರಂಗನಬೆಟ್ಟಕ್ಕೆ ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭೇಟಿ ನೀಡಿ ಬಿಳಿಗಿರಿ ರಂಗನಾಥ ಸ್ವಾಮಿಯ ದರ್ಶನ ಪಡೆದರು .
ವಡಗೆರೆ ಗ್ರಾಮದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಹೆಲಿಪ್ಯಾಡ್ ಗೆ ಕುಟುಂಬ ಸಮೇತರಾಗಿ ಬಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸ್ವಾಗತವನ್ನು ಕೋರಲಾಯಿತು. ನಂತರ ರಸ್ತೆ ಮಾರ್ಗವಾಗಿ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳಿದರು.
ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆಯೆ ದೇಗುಲದ ಸಿಬ್ಬಂದಿ ವರ್ಗ ಮಂಗಳವಾದ್ಯಗಳ ಮೂಲಕ ದೇವಸ್ಥಾನಕ್ಕೆ ಆಹ್ವಾನಿಸಿಕೊಂಡರು. ಬಿಳಿಗಿರಿ ರಂಗನಾಥ ಸ್ವಾಮಿ ಹಾಗೂ ಅಲಮೇಲು ರಂಗನಾಯಕಿ ಅಮ್ಮನವರ ದರ್ಶನವನ್ನು ಪಡೆದರು. ದೇಗುಲವನ್ನು ವಿಶೇಷವಾಗಿ ಸಿದ್ಧಗೊಳಿಸಲಾಗಿತ್ತು.
ಸ್ಥಳೀಯ ಶಾಸಕ ಎನ್. ಮಹೇಶ್ ಕೂಡ ರಾಷ್ಟ್ರಪತಿಗಳ ಜೊತೆಯಲ್ಲಿ ಕಾಣಿಸಿಕೊಂಡರು. ದರ್ಶನ ಮುಗಿದ ನಂತರ ಮತ್ತೆ ವಡಗೆರೆ ಗೆ ರಸ್ತೆ ಮಾರ್ಗವಾಗಿ ಬಂದ ರಾಷ್ಟ್ರಪತಿಗಳು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಚಾಮರಾಜನಗರದ ಆಸ್ಪತ್ರೆ ಉದ್ಘಾಟನೆಗೆ ತೆರಳಿದರು.