ನವದೆಹಲಿ: ಎದೆಯಲ್ಲಿ ದಿಢೀರ್ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ (ಮಾರ್ಚ್ 26) ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಹುಚ್ಚು ಸಾಹಸ; ವಿಡಿಯೋ ನೋಡಿ ತಲೆ ಕೂದಲಿಗೆ ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿ… ನಡೆದಿದ್ದೇನು?
ದೆಹಲಿ ಆರ್ಮಿಯ ರಿಸರ್ಚ್ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ರಾಷ್ಟ್ರಪತಿ ತಪಾಸಣೆಗೆ ಒಳಗಾಗಿದ್ದು, ಅವರನ್ನು ನಿಗಾಘಟಕದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ರಾಮನಾಥ್ ಕೋವಿಂದ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಬಿಡುಗಡೆ ಮಾಡಿರುವ ಮೆಡಿಕಲ್ ಬುಲೆಟಿನ್ ನಲ್ಲಿ ತಿಳಿಸಿದೆ. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಬಾಂಗ್ಲಾದೇಶ ಪ್ರವಾಸದಲ್ಲಿದ್ದು, ರಾಷ್ಟ್ರಪತಿಯವರ ಆರೋಗ್ಯದ ಕುರಿತು ಪುತ್ರನ ಬಳಿ ವಿಚಾರಿಸಿರುವುದಾಗಿ ವರದಿ ತಿಳಿಸಿದೆ. ಕೋವಿಂದ್ ಅವರ ಆರೋಗ್ಯ ಶೀಘ್ರವಾಗಿ ಚೇತರಿಕೆಯಾಗಲಿ ಎಂದು ಪ್ರಧಾನಿ ಪ್ರಾರ್ಥಿಸಿರುವುದಾಗಿ ಪ್ರಧಾನಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ರಾಷ್ಟ್ರಪತಿ ಕೋವಿಂದ್ (75) ಆರೋಗ್ಯಕ್ಕೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದಲ್ಲಿ ವೈದ್ಯಕೀಯ ತಪಾಸಣೆ ನಡೆಯುವವರೆಗೆ ಆಸ್ಪತ್ರೆಯಲ್ಲಿ ಇರಲಿದ್ದು, ವೈದ್ಯರು ಅವರ ಬಗ್ಗೆ ನಿಗಾ ವಹಿಸಲಿದ್ದಾರೆ ಎಂದು ವರದಿ ಹೇಳಿದೆ.