ನವದೆಹಲಿ: ಬಾಂಗ್ಲಾದೇಶ ವಿಮೋಚನೆಯ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಬುಧವಾರದಿಂದ(ಡಿಸೆಂಬರ್ 15) ಮೂರು ದಿನಗಳ ಕಾಲ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಅವರು ಐತಿಹಾಸಿಕ ರಾಮ್ನಾ ಕಾಳಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ
ಮೊಘಲ್ ಸಾಮ್ರಾಜ್ಯ ಕಾಲದಲ್ಲಿದ್ದ ಐತಿಹಾಸಿಕ ರಾಮ್ನಾ ಕಾಳಿ ದೇವಾಲಯವನ್ನು ಬಾಂಗ್ಲಾದೇಶ್ ವಿಮೋಚನಾ ಯುದ್ಧದ ಸಂದರ್ಭದಲ್ಲಿ (1971) ಪಾಕಿಸ್ತಾನ ಸೇನೆ ದೇವಾಲಯವನ್ನು ಧ್ವಂಸಗೊಳಿಸಿತ್ತು. 1971 ಬಾಂಗ್ಲಾದೇಶ ವಿಮೋಚನೆಯ ಯುದ್ಧದ ವೇಳೆ ಪಾಕ್ ಸೇನೆ ಆಪರೇಷನ್ ಸರ್ಚ್ ಲೈಟ್ ಹೆಸರಿನಲ್ಲಿ ರಾಮ್ನಾ ದೇವಾಲಯವನ್ನು ಧ್ವಂಸಗೊಳಿಸಿದ್ದಲ್ಲದೇ, ಪೂರ್ವ ಪಾಕಿಸ್ತಾನದ ಭಾಗದಲ್ಲಿದ್ದ ಸಾವಿರಾರು ಸ್ಥಳೀಯರು, ಹಿಂದೂಗಳನ್ನು ಹತ್ಯೆಗೈದಿತ್ತು ಎಂದು ವರದಿ ವಿವರಿಸಿದೆ.
2017ರಲ್ಲಿ ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದ ವೇಳೆ ಐತಿಹಾಸಿಕ ರಾಮ್ನಾ ಕಾಳಿ ದೇವಾಲಯದ ಪುನರ್ ನಿರ್ಮಾಣಕ್ಕೆ ಭಾರತ ನೆರವು ನೀಡಲಿದೆ ಎಂಬುದಾಗಿ ಘೋಷಿಸಿದ್ದರು.
ಈ ದೇವಾಲಯ ಧ್ವಂಸಗೊಳ್ಳುವ ಮೊದಲು ಢಾಕಾದಲ್ಲಿ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿತ್ತು. 1971ರ ಮಾರ್ಚ್ 7ರಂದು ಬಾಂಗ್ಲಾದೇಶದ ಪಿತಾಮಹ ಶೇಖ್ ಮುಕಿಬುರ್ ರಹಮಾನ್ ಅವರು ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಹಲವು ಫೋಟೋಗಳಲ್ಲಿ ಈ ದೇವಾಲಯ ಕಾಣಿಸುತ್ತಿತ್ತು ಎಂದು ವರದಿ ಹೇಳಿದೆ.
ಇದೀಗ ಭಾರತ ಸರ್ಕಾರದ ನೆರವಿನೊಂದಿಗೆ ಪುನರ್ ನಿರ್ಮಾಣಗೊಂಡಿರುವ ಐತಿಹಾಸಿಕ ರಾಮ್ನಾ ಕಾಳಿ ಮಾತಾ ದೇವಾಲಯಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಭೇಟಿ ನೀಡಿ, ಪೂಜೆ ಸಲ್ಲಿಸಲಿದ್ದಾರೆ ಎಂದು ವರದಿ ತಿಳಿಸಿದೆ.