ತಿಮ್ಮಕ್ಕನ ನಡೆಗೆ ಪ್ರಧಾನಿ ಮೋದಿ ಸಹಿತ ಇಡೀ ಸಭಾಂಗಣದ ಮೆಚ್ಚುಗೆ, ಕರತಾಡನ
Advertisement
ಹೊಸದಿಲ್ಲಿ: ಅದೆಂತಹ ತಾಯಿ ಹೃದಯ ಆಕೆಯದ್ದು! ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದ ಕೈಗಳಿಂದಲೇ ರಾಷ್ಟ್ರಪತಿಯವರಿಗೆ ಆಶೀರ್ವಾದ! ಅಲ್ಲಿ ರಾಷ್ಟ್ರಪತಿ-ಪ್ರಜೆ ಎಂಬ ಭೇದವಿಲ್ಲ. ಶಿಷ್ಟಾಚಾರ ಉಲ್ಲಂಘನೆ ಆರೋಪವಿಲ್ಲ. ಅಲ್ಲಿ ಇದ್ದದ್ದು ಕೇವಲ ಮುಗ್ಧತೆ ತುಂಬಿದ ಮಾತೃಭಾವ. ಇಂಥ ಅಪೂರ್ವ ಪ್ರಸಂಗ ನಡೆದಿದ್ದು ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಪದ್ಮ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ. ವೇದಿಕೆಯ ಮೇಲೆ ಹೋಗಿ “ಪದ್ಮಶ್ರೀ’ ಸ್ವೀಕರಿಸಿದ ಕರ್ನಾಟಕದ “ವೃಕ್ಷ ಮಾತೆ’ ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ಸ್ವೀಕರಿಸುವಾಗ ಕೆಮರಾಗಳ ಕಡೆಗೆ ಮುಖ ಮಾಡಲಿಲ್ಲ. ಇದನ್ನು ಗಮನಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್, ಕೆಮರಾಗಳ ಕಡೆ ಮುಖ ಮಾಡುವಂತೆ ತಿಮ್ಮಕ್ಕ ಅವರಲ್ಲಿಗೆ ಬಾಗಿ ಸೂಚಿಸಿದರು. ಅದನ್ನು ಅರ್ಥೈಸದ ಮುಗ್ದೆ ತಿಮ್ಮಕ್ಕ, ತಮ್ಮ ಬಲಗೈಯನ್ನು ಕೋವಿಂದ್ ಅವರ ಮುಂದಲೆ ಮೇಲಿಟ್ಟು ಆಶೀರ್ವಾದ ಮಾಡಿದರು. ತಿಮ್ಮಕ್ಕರ ಈ ನಡೆ ಸಭಾಂಗಣದಲ್ಲಿ ನಗುವಿನ ಅಲೆ, ಚಪ್ಪಾಳೆಯ ಅಲೆಯನ್ನು ಎಬ್ಬಿಸಿತು. ತಿಮ್ಮಕ್ಕರಿಗಿಂತ 33 ವರ್ಷ ಕಿರಿಯರಾದ ರಾಷ್ಟ್ರಪತಿ ಸಹ ಮುಗುಳ್ನಗುತ್ತಾ ಆಶೀರ್ವಾದ ಸ್ವೀಕರಿಸಿದರು.
-ರಾಮನಾಥ ಕೋವಿಂದ್, ರಾಷ್ಟ್ರಪತಿ