Advertisement

ಅಧ್ಯಕ್ಷ ಪವರ್‌ಫ‌ುಲ್‌: ಅಂತಿಮ ನಿರ್ಧಾರ ಶ್ಯಾಮನೂರು ಹೆಗಲಿಗೆ

06:00 AM Jan 08, 2018 | |

ಬೆಂಗಳೂರು: ವೀರಶೈವ-ಲಿಂಗಾಯತ ಒಂದೇ ಎಂಬ ಸಂದೇಶ ರವಾನಿಸುವ ನಿಟ್ಟಿನಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ಹೆಸರು “ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾ’ ಎಂದು ಬದಲಾಯಿಸಲು ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಅಧಿಕಾರ ನೀಡಲಾಗಿದೆ.

Advertisement

ನಗರದ ಆರ್‌.ಟಿ.ನಗರದ ತರಳಬಾಳು ಕೇಂದ್ರದಲ್ಲಿ ಭಾನುವಾರ ನಡೆದ ಅಖೀಲ ಭಾರತ ವೀರಶೈವ ಮಹಾಸಭಾ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಈ ಕುರಿತ ಅಜೆಂಡಾ ಮಂಡಿಸಿ ಬೈಲಾ ತಿದ್ದುಪಡಿ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಲು ತೀರ್ಮಾನಿಸಲಾಯಿತು.

ಜತೆಗೆ, ಸಮಾಜ ಒಡೆಯುವುದನ್ನು ತಪ್ಪಿಸಲು ಹತ್ತು ಲಕ್ಷ ಜನರನ್ನು ಸೇರಿಸಿ ಬೃಹತ್‌ ಸಮಾವೇಶ ನಡೆಸಿ ಸಮುದಾಯದ ಎಲ್ಲ ಪೀಠಾಧಿಪತಿಗಳನ್ನು ಒಂದೇ ವೇದಿಕೆಗೆ ಕರೆತಂದು ವೀರಶೈವ -ಲಿಂಗಾಯತ ಒಂದೇ ಎಂಬ ಸಂದೇಶ ಸಾರಲು ಸಭೆ ನಿರ್ಧರಿಸಿತು. ಅಲ್ಲದೆ, ಈ ಕಾರ್ಯದ ಹೊಣೆಗಾರಿಕೆಯನ್ನೂ ಶ್ಯಾಮನೂರು ಶಿವಶಂಕರಪ್ಪ ಅವರಿಗೇ ವಹಿಸಲಾಯಿತು.

ಸಭೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿಚಾರ ಕೂಡ ಪ್ರಸ್ತಾಪವಾಯಿತಾದರೂ ಅದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿ ವೀರಶೈವ -ಲಿಂಗಾಯಿತ ಪ್ರತ್ಯೇಕವಲ್ಲ, ಭಾರತ-ಇಂಡಿಯಾ ಇದ್ದಂತೆ. ವಿರಶೈವ-ಲಿಂಗಾಯತ ಒಂದೇ ನಾಣ್ಯದ ಎಡರು ಮುಖಗಳು. ನಮ್ಮದು ಭಿನ್ನಧರ್ಮವಲ್ಲ, ಒಂದೇ ಧರ್ಮ. ವೀರಶೈವ-ಲಿಂಗಾಯತರು ಒಗ್ಗಟ್ಟಿನಿಂದ ಸ್ವತಂತ್ರ ಧರ್ಮದ ಸ್ಥಾನಮಾನ ಪಡೆಯಬೇಕು ಎಂಬ ಪ್ರತಿಪಾದನೆ ಕೇಳಿಬಂತು.

ಪ್ರಸ್ತುತ ಸಂದರ್ಭದಲ್ಲಿ ಮಹಾಸಭಾ ಹೆಸರು ಬದಲಾವಣೆ ಮಾಡುವುದು ಬೇಡ ಎಂಬ ವಾದ ಕೆಲವರು ಮಂಡಿಸಿದರೂ ಅಂತಿಮ ಅಧಿಕಾರ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ನೀಡಲಾಯಿತು.

Advertisement

10 ಲಕ್ಷ ಜನರನ್ನು ಒಟ್ಟಿಗೆ ಸೇರಿಸಿ ಬೃಹತ್‌ ಸಮಾವೇಶ ನಡೆಸಿ ನಾವೆಲ್ಲಾ ಒಂದೇ ಎಂಬ ಸಂದೇಶ ರವಾನಿಸಬೇಕು. ಆ ಬಗ್ಗೆ ಅಧ್ಯಕ್ಷರೇ ನಿರ್ಧಾರ ಕೈಗೊಳ್ಳಲಿ. ಎಲ್ಲ ಪೀಠಗಳ ಸ್ವಾಮೀಜಿಗಳನ್ನು ಒಂದೇ ವೇದಿಕೆಗೆ ಕರೆತರಬೇಕು. ಸಮಾಜ ಒಡೆಯಲು ಬಿಡಬಾರದು. ಇದಕ್ಕೆ ಮಹಾಸಭಾ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒಕ್ಕೊರಲ ಆಗ್ರಹ ಕೇಳಿಬಂತು.

ಪಾಟೀಲ್‌ ವಿರುದ್ಧ ಆಕ್ರೊಶ
ಪ್ರತ್ಯೇಕ ಧರ್ಮದ ಮಾನ್ಯತೆ ವಿಚಾರದಲ್ಲಿ ಸಚಿವ ಎಂ.ಬಿ.ಪಾಟೀಲ್‌ ಅವರ ನಡೆಯ ಬಗ್ಗೆಯೂ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಇದೇ ರೀತಿ ಮುಂದುವರಿದರೆ ಅವರ ಕ್ಷೇತ್ರದಲ್ಲಿಯೇ ಸೂಕ್ತ ಪಾಠ ಕಲಿಸಬೇಕಾಗುತ್ತದೆ ಎಂಬ ಮಾತುಗಳು ಕೇಳಿಬಂದವು.

ಸಿದ್ಧಗಂಗಾ ಶ್ರೀಗಳು ಇಡೀ ಸಮಾಜದ ಆಸ್ತಿ. ಆದರೂ ಎಂ.ಬಿ.ಪಾಟೀಲ್‌ ಅವರು ಈ ವಿವಾದದಲ್ಲಿ ಶ್ರೀಗಳನ್ನು ಎಳೆತಂದಿದ್ದು ಸರಿಯಲ್ಲ. ನೀವ್ಯಾಕೆ ಸಚಿವರಿಗೆ ತಿಳಿ ಹೇಳಲಿಲ್ಲ ಎಂದು ಸಭೆಯಲ್ಲಿದ್ದ ಸಚಿವ ಈಶ್ವರ ಖಂಡ್ರೆ ವಿರುದ್ಧವೂ ಆಕ್ರೋಶ ವ್ಯಕ್ತವಾಯಿತು. ಮತ್ತೆ ಗೊಂದಲಕ್ಕೆ ಅವಕಾಶ ಮಾಡಿಕೊಡುವುದು ಬೇಡ ಎಂದು ಸಚಿವ ಈಶ್ವರ ಖಂಡ್ರೆ ಎಲ್ಲರನ್ನೂ ಸಮಾಧಾನಪಡಿಸಿದರು.

ರಾಜ್ಯ ಸರ್ಕಾರವು ಪ್ರತ್ಯೇಕ ಧರ್ಮ ಮಾನ್ಯತೆ ಸಂಬಂಧ ರಚಿಸಿರುವ ನ್ಯಾ.ನಾಗಮೋಹನ್‌ದಾಸ್‌ ನೇತೃತ್ವದ ತಜ್ಞರ ಸಮಿತಿ ಹಾಗೂ ಸಮಿತಿಯ ಹೇಳಿಕೆ ಕುರಿತು ಚರ್ಚೆ ನಡೆಯಿತಾದರೂ ಆ ಸಮಿತಿಯೇ ಕಾನೂನು ಬಾಹಿರ. ನಾವು ಆ ಸಮಿತಿಯ ಮುಂದೆ ಯಾಕೆ ಹೋಗಬೇಕು ಎಂದು ಖುದ್ದು ಶ್ಯಾಮನೂರು ಶಿವಶಂಕರಪ್ಪ ಕಿಡಿ ಕಾರಿದರು.

ಶ್ಯಾಮನೂರು ಶಿವಶಂಕರಪ್ಪ,  ಭೀಮಣ್ಣ ಖಂಡ್ರೆ, ಎನ್‌.ತಿಪ್ಪಣ್ಣ, ಸಚಿವ  ಈಶ್ವರ ಖಂಡ್ರೆ, ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್‌, ವೀರಣ್ಣ ಚರಂತಿಮs… ಉಪಸ್ಥಿತರಿದ್ದರು.

ನಿರ್ಧಾರ ಅಚಲ
ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮ ಮಾನ್ಯತೆಗೆ ಹೋರಾಟ ಮಾಡುತ್ತಿದ್ದೇವೆ. ಮಹಾಸಭಾದಿಂದ  ಈ ಬಗ್ಗೆ ಕೇಂದ್ರಕ್ಕೂ ಮನವಿ ಮಾಡಿದ್ದೇವೆ.  ರಾಜ್ಯ ಸರ್ಕಾರದ ಗಮನಕ್ಕೂ ತಂದಿದ್ದೇವೆ. ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ.
-ಸಚಿವ ಈಶ್ವರ ಖಂಡ್ರೆ

ನಾವೇಕೆ ಹೋಗಬೇಕು?
ಮಹಾಸಭಾ ಹೆಸರು ಬದಲಾವಣೆಯ ಅಂತಿಮ ಅಧಿಕಾರ ನನಗೆ ಕೊಟ್ಟಿದ್ದಾರೆ. ಪ್ರತ್ಯೇಕ ಧರ್ಮ ಕುರಿತ ಸರ್ಕಾರದ ತಜ್ಞರ ಸಮಿತಿ ಕಾನೂನು ಬಾಹಿರ.ಈ ಸಮಿತಿ ಮುಂದೆ ನಾವೇಕೆ ಹೋಗಬೇಕು.
-ಶ್ಯಾಮನೂರು ಶಿವಶಂಕರಪ್ಪ

ಹೆಸರು ಬದಲಾವಣೆ ಬೇಡ
ವೀರಶೈವ ಲಿಂಗಾಯಿತ ಎರಡನ್ನೂ ಸೇರಿಸಲು ಮಹಾಸಭಾದಲ್ಲೇ ಅಸಮಾಧಾನ ವ್ಯಕ್ತವಾಯಿತು. ಮಹಾಸಭಾದ ಹೆಸರು ಬದಲಾವಣೆಗೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಇದಕ್ಕೆ ಯಾರೂ ಒಪ್ಪಬಾರದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ವಾಗೀಶ್‌ ಪ್ರಸಾದ್‌ ಮನವಿ ಸಲ್ಲಿಸಿದರು. ಪ್ರಸ್ತುತ ಸಮಾಜದಲ್ಲಿ ಗೊಂದಲ ಇರುವುದರಿಂದ ಹೆಸರು ಬದಲಾವಣೆ ಬೇಡ. ಹಾನಗಲ್‌ ಕುಮಾರಸ್ವಾಮಿ ಶಿವಯೋಗಿ ಶ್ರೀಗಳು 100 ವರ್ಷಗಳ ಹಿಂದೆ ಅಖೀಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ್ದಾರೆ. ಆ ಹೆಸರು ಬದಲಾಯಿಸುವುದು ಸರಿಯಲ್ಲ. ಆದರೂ ಹಿರಿಯರಾದ ಶ್ಯಾಮನೂರು ಶಿವಶಂಕರಪ್ಪ ಹಾಗೂ ಭೀಮಣ್ಣ  ಖಂಡ್ರೆ ಅವರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದೂ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next