ಹನೂರು(ಚಾಮರಾಜನಗರ): ಆಡಳಿತಾತ್ಮಕ ಹಿತದೃಷ್ಠಿಯಿಂದ ಕೊಳ್ಳೇಗಾಲ ತಾಲೂಕನ್ನು ವಿಭಜಿಸಿ ನೂತನವಾಗಿ ರಚನೆಯಾಗಿರುವ ಹನೂರು ತಾಲೂಕು ಪಂಚಾಯಿತಿಗೆ ಜು.29ರಂದು ಚೊಚ್ಚಲ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯನ್ನು ಘೋಷಣೆ ಮಾಡಿ ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಜು.29ರಂದು ಚೊಚ್ಚಲ ಚುನಾವಣೆ: ನೂನವಾಗಿ ರಚನೆಯಾಗಿರುವ ಹನೂರು ತಾಲೂಕು ಪಂಚಾಯಿತಿಗೆ ಮಂಗಲ, ಬಂಡಳ್ಳಿ, ಮಣಗಳ್ಳಿ, ಶಾಗ್ಯ, ಕೌದಳ್ಳಿ, ಕುರಟ್ಟಿ ಹೊಸೂರು, ಸೂಳೇರಿಪಾಳ್ಯ, ಪೊನ್ನಾಚಿ, ಮಹದೇಶ್ವರ ಬೆಟ್ಟ, ಮಾರ್ಟಳ್ಳಿ, ಹೂಗ್ಯಂ, ಮೀಣ್ಯಂ, ರಾಮಾಪುರ, ಅಜ್ಜೀಪುರ, ಹುತ್ತೂರು, ಪಿ.ಜಿ.ಪಾಳ್ಯ ಮತ್ತು ಲೊಕ್ಕನಹಳ್ಳಿಯ 17 ಪಂಚಾಯಿತಿಗಳು ಒಳಪಡಲಿದೆ. 17 ಪಂಚಾಯಿತಿ ಕ್ಷೇತ್ರಗಳನ್ನೊಳಗೊಂಡಿರುವ ಹನೂರು ತಾ.ಪಂನ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಎ) ಮಹಿಳೆಗೂ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ ಮೀಸಲಿರಿಸಲಾಗಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗಾಗಿ ಕೊಳ್ಳೇಗಾಲ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜುಲೈ 29ರ ಬುಧವಾರದಂದು ಚುನಾವಣೆ ಘೋಷಣೆ ಮಾಡಲಾಗಿದೆ.
ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆ: ನೂತನವಾಗಿ ರಚನೆಯಾಗಿರುವ ಹನೂರು ತಾ.ಪಂ ನ ಅಧ್ಯಕ್ಷ ಚುನಾವಣೆಯನ್ನು ಹನೂರು ಪಟ್ಟಣದಲ್ಲಿ ನಡೆಸುವ ಬದಲು ಮತ್ತೆ ತವರು ತಾಲೂಕಾದ ಕೊಳ್ಳೇಗಾಲದಲ್ಲಿಯೇ ನಿಗದಿ ಮಾಡಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಮೂರು ದಶಕಗಳ ಹೋರಾಟದ ಫಲವಾಗಿ ರಚನೆಯಾಗಿರುವ ಹನೂರಿನಲ್ಲಿ ಚುನಾವಣೆ ನಡೆಸಿ ಮುಂಬರುವ ದಿನಗಳಲ್ಲಿ ಎಲ್ಲಾ ಇಲಾಖೆಗಳ ಸೇವೆಯು ಹನೂರು ಪಟ್ಟಣದಲ್ಲಿಯೇ ದೊರೆಯುತ್ತದೆ ಎಂಬ ಸಂದೇಶ ನೀಡಿ ಸಾರ್ವಜನಿಕರಿಗೆ ಆಶಾಭಾವನೆ ಮೂಢಿಸಬೇಕಾದ ತಾಲೂಕು ಆಡಳಿತ ಮತ್ತೊಮ್ಮೆ ಕೊಳ್ಳೇಗಾಲದತ್ತಲೇ ಮುಖ ಮಾಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಈ ದಿಸೆಯಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳೂ ಕೂಡ ತಾಲೂಕು ಆಡಳತಕ್ಕೆ ಮನವರಿಕೆ ಮಾಡಿಕೊಟ್ಟು ಚುನಾವಣೆ ಪ್ರಕ್ರಿಯೆಯನ್ನು ಹನೂರು ಪಟ್ಟಣದ ತಾಲೂಕು ಪಂಚಾಯಿತಿಗಾಗಿ ಗುರುತಿಸಲ್ಪಟ್ಟಿರುವ ಕಚೇರಿ ಅಥವಾ ಇನ್ನಿತರ ಸರ್ಕಾರಿ ಕಚೇರಿಗಳಲ್ಲಿ ನಡೆಸಿ ವಿವಿಧ ಇಲಾಖೆಗಳನ್ನು ಶೀಘ್ರವಾಗಿ ವಿಭಜಿಸಿ ಸಾರ್ವಜನಿಕರಿಗೆ ಸೇವೆ ಒದಗಿಸಬೇಕು ಎಂಬುವುದು ಸಾರ್ವಜನಿಕರ ಅಂಬೋಣವಾಗಿದೆ.