ನವದೆಹಲಿ: ತೆಲಂಗಾಣ ರಾಜ್ಯಪಾಲ ಹುದ್ದೆ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ಡಾ.ತಮಿಳಿಸೈ ಸೌಂದರ್ ರಾಜನ್ ನೀಡಿರುವ ರಾಜೀನಾಮೆಯನ್ನು ಸ್ವೀಕರಿಸಿರುವುದಾಗಿ ರಾಷ್ಟ್ರಪತಿ ಭವನ ಮಂಗಳವಾರ (ಮಾರ್ಚ್ 19) ತಿಳಿಸಿದ್ದು, ಜಾರ್ಖಂಡ್ ರಾಜ್ಯಪಾಲರಾದ ಸಿ.ಪಿ.ರಾಧಾಕೃಷ್ಣನ್ ಅವರಿಗೆ ತೆಲಂಗಾಣ ಮತ್ತು ಪುದುಚೇರಿಯ ಗವರ್ನರ್ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದ್ದಾರೆ.
ಇದನ್ನೂ ಓದಿ:Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
ತೆಲಂಗಾಣ ಮತ್ತು ಪುದುಚೇರಿಗೆ ಪೂರ್ಣ ಪ್ರಮಾಣದ ಗವರ್ನರ್, ಲೆಫ್ಟಿನೆಂಟ್ ಗವರ್ನರ್ ನೇಮಕಾತಿ ಆಗುವವರೆಗೆ ಸಿಪಿ ರಾಧಾಕೃಷ್ಣನ್ ಅವರು ಹೆಚ್ಚುವರಿಯಾಗಿ ಈ ಹೊಣೆಗಾರಿಕೆಯನ್ನು ನಿಭಾಯಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನ ಪ್ರಕಟನೆ ತಿಳಿಸಿದೆ.
ತೆಲಂಗಾಣ ರಾಜ್ಯಪಾಲರಾಗಿದ್ದ ತಮಿಳಿಸೈ ಸೌಂದರ್ ರಾಜನ್ ಅವರು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಕಾರ್ಯನಿರ್ವಹಿಸಿದ್ದು, ಅವರು ಸೋಮವಾರ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಸೌಂದರ್ ರಾಜನ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ರಾಜೀನಾಮೆ ನೀಡಿದ್ದಾರೆನ್ನಲಾಗಿದೆ. ರಾಜಕೀಯ ಸ್ಪರ್ಧೆ ಬಗ್ಗೆ ಇನ್ನಷ್ಟೇ ಖಚಿತ ಮಾಹಿತಿ ಹೊರಬೀಳಬೇಕಾಗಿದೆ.